ಬೆಂಗಳೂರು: ದುಷ್ಕರ್ಮಿಗಳು ನಡೆಸಿದ ಭೀಕರ ದಾಳಿಗೆ ಒಳಗಾಗಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಸ್ಥಳದಲ್ಲಿಯೇ ಓಡಾಡುತ್ತಿದ್ದರೂ ಜನರು ನೆರವಿಗೆ ಧಾವಿಸದೆ ಇರುವ ಹೃದಯವಿದ್ರಾವಕ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಹೃದಯಭಾಗವಾಗಿರುವ ರೇಸ್ ಕೋರ್ಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯಾಗಿರುವ ಶಿಕ್ಷಾ ಐಎಎಸ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸತೀಶ್. ಪಿ (24) ಎಂಬವವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ದಾಳಿಗೊಳಗಾಗಿರುವ ಸತೀಶ್ ಅವರು ಖಾಸಗಿ ಬಸ್ ವೊಂದರಲ್ಲಿ ಆಂಧ್ರಪ್ರದೇಶದ ಚಿತ್ತೂರಿಗೆ ಹೋಗುತ್ತಿದ್ದರು. ಇದರಂತೆ, ಮಿನಿ ಬಸ್ ವೊಂದರಲ್ಲಿ ಆನಂದ್ ರಾವ್ ಸರ್ಕಲ್ ವರೆಗೂ ಬಂದಿದ್ದಾರೆ. ನಂತರ ಚಿತ್ತೂರಿನ ಬಸ್ಸಿಗೆ ಹೋಗುವ ಸಲುವಾಗಿ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಸತೀಶ್ ಅವರನ್ನು ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ.
ಸತೀಶ್ ಅವರು ಕಾರಿನಲ್ಲಿ ಬಂದಿರಬಹುದು ಎಂದು ತಿಳಿದಿದ್ದ ದುಷ್ಕರ್ಮಿಗಳು ಕಾರನ್ನು ಹತ್ತುವಂತೆ ಸತೀಶ್ ಅವರಿಗೆ ಸೂಚಿಸಿದ್ದಾರೆ. ಈ ವೇಳೆ ಸತೀಶ್ ಅವರು ತಮ್ಮ ಬಳಿ ಕಾರಿಲ್ಲ ಎಂದು ಹೇಳಿದ್ದಾರೆ. ಇದನ್ನು ನಂಬದ ದುಷ್ಕರ್ಮಿಗಳು ಸುಳ್ಳು ಹೇಳುತ್ತಿದ್ದಾನೆಂದು ತಿಳಿದು ಸ್ಥಳದಲ್ಲಿದ್ದ ಆಟೋಮೊಬೈಲ್ ಶೋರೂಂವೊಂದರ ಬಳಿ ಕರೆದೊಯ್ಡು ಮನಬಂದಂತೆ ಅವರ ಮೇಲೆ ಚೂರಿಯಿಂದ ಇರಿದಿದ್ದಾರೆ. ಅಲ್ಲದೆ, ಟೈಲ್ಸ್ ನಿಂದ ಅವರ ತಲೆ ಮೇಲೆ ಹೊಡೆದಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.
ಗಂಟೆಗಳ ಕಾಲ ಸತೀಶ್ ಅವರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಸ್ಥಳದಲ್ಲಿಯೇ ಓಡಾಡುತ್ತಿದ್ದ ಜನರು ನೆರವಿಗೆ ಧಾವಿಸಿಲ್ಲ. ಸ್ವಲ್ಪ ಸಮಯದ ಬಳಿಕ ಕೆಲವರು ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ಜಯನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಇದೀಗ ಸತೀಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ದುಷ್ಕರ್ಮಿಗಳು ದಾಳಿಗೊಳಗಾದ ವ್ಯಕ್ತಿಗಳೇ ಆಗಿದ್ದಾರೆ. ಪ್ರತೀಕಾರ ತೀರಿಸಿಕೊಳ್ಳಲು ಸತೀಶ್ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ. ದಾಳಿಕೋರರು ಗೊತ್ತಿಲ್ಲ ಎಂದು ಸತೀಶ್ ಹೇಳುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics