ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 1,700 ಉಪನ್ಯಾಸಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ.
ಪದವಿ ಪೂರ್ವ ಕಾಲೇಜಿನಲ್ಲಿ ಬೋಧನೆ ಮಾಡು ಉಪನ್ಯಾಸಕರಿಗೆ ಬಿಎಡ್ ತರಬೇತಿ ಕಡ್ಡಾಯ ಮಾಡಿರುವ ಆದೇಶದ ಹಿನ್ನೆಲೆಯಲ್ಲಿ ಪದವಿ ಪೂರ್ವ ಇಲಾಖೆ 1,763 ಉಪನ್ಯಾಸಕರುಗಳನ್ನು ತರಬೇತಿಗೆ ಕಳುಹಿಸಿ ತಿಂಗಳಿಗೆ ರು. 24 ಸಾವಿರ ಸ್ಟೈಪಂಡ್ ನೀಡುವುದಾಗಿ ಭರವಸೆ ನೀಡಿತ್ತು.
ಆದರೆ ಬಿ.ಎಡ್ ಕೋರ್ಸ್ ಆರಂಭವಾಗಿ ನಾಲ್ಕು ತಿಂಗಳಾಗಿದ್ದರೂ ಇದುವರೆಗೂ ಇಲಾಖೆ ಅವರಿಗೆ ಯಾವುದ್ ಸ್ಟೈಪಂಡ್ ನೀಡಿಲ್ಲ, ಅತಿ ಹೆಚ್ಚಿನ ಉಪನ್ಯಾಸಕರು ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದಾರೆ. ನಾನು ಸಿಂಗಲ್ ಪೇರೆಂಟ್ ಆಗಿದ್ದು, ನಾನು ನನ್ನ ಮಗು ಮತ್ತು ಕುಟುಂಬವನ್ನು ಸಲಹುವ ಹೊಣೆಗಾರಿಕೆಯಿದೆ ಎಂದು ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ನನಗೆ ಒಂದು ನಯಾ ಪೈಸೆ ಕೂಡ ವೇತನ ಪಾವತಿಯಾಗಿಲ್ಲ, ನನ್ನ ಮಗುವಿನ ಶಾಲೆಯ ಫೀಸ್ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮೀಣ ಭಾಗದ ಕಾಲೇಜಿನಿಂದ ಬೆಂಗಳೂರಿಗೆ ನೇಮಕಗೊಂಡಿರುವ ಉಪನ್ಯಾಸಕರೊಬ್ಬರು ತಮ್ಮ ಸಮಸ್ಯೆ ಹೇಳಿದ್ದಾರೆ.
ನನ್ನನ್ನು ಕೆಲ ತಿಂಗಳುಗಳ ಹಿಂದೆ ಮಂಡ್ಯ ಜಿಲ್ಲೆಗೆ ಪೋಸ್ಟಿಂಗ್ ಹಾಕಲಾಗಿತ್ತು, ಕೆಲ ತಿಂಗಳು ನಾನು ಕೆಲಸ ಮಾಡಿದೆ. ನಂತರ ನನಗೆ ಬಿಎಡ್ ತರಬೇತಿ ಪಡೆಯಲು ಸೂಚಿಸಲಾಯಿತು. ಇದುವರೆಗೂ ಒಂದು ರೂಪಾಯಿ ಕೂಡ ನೀಡಿಲ್ಲ ಎಂದು ಹೇಮಾಕಾಂತ್ ಎಂಬುವರು ತಿಳಿಸಿದ್ದಾರೆ.
ಸತವವಾಗಿ ಪ್ರತಿಭಟನೆ ನಡೆಸಿ ನಮ್ಮ ಪ್ರತಿನಿಧಿಗಳು ಸಂಬಂಧಪಟ್ಟವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ, ನಮ್ಮ ಸಮಸ್ಯೆಯನ್ನು ಯಾರೂ ಪರಿಗಣಿಸುತ್ತಿಲ್ಲ, ಶೀಘ್ರವೇ ಹಣ ಬಿಡುಗಡೆ ಮಾಡಬೇಕೆಂದು ಶಿವಾನಂದ ಎಂಬುವರು ಒತ್ತಾಯಿಸಿದ್ದಾರೆ.
ಸ್ಟೈಪಂಡ್ ನೀಡುವ ಯಾವುದೇ ಅವಕಾಶವಿಲ್ಲ, ಸದ್ಯ ಕಡತ ಹಣಕಾಸು ಇಲಾಖೆಯಲ್ಲಿದೆ, ವಿವರಣೆ ಕೋರಿ ಕಡತವನ್ನು ವಾಪಾಸ್ ಕಳುಹಿಸಲಾಗಿದೆ. ಪಿಯಸಿ ಉಪನ್ಯಾಸಕರಿಗೆ ಪ್ರತಿ ತಿಂಗಳು 40 ಸಾವಿರ ರು. ವೇತನ ನೀಡಲಾಗುತ್ತದೆ. ಬಿಎಡ್ ಕೋರ್ಸ್ ಮುಗಿಯುವವರೆಗೂ ಅದರ ಅರ್ಧ ದಷ್ಟು ವೇತನ ನೀಡಲು ನಿರ್ಧರಿಸಲಾಗಿತ್ತು, ಆದರೆ ಹಣಕಾಸು ಇಲಾಖೆ ಕಡತವನ್ನು ತಡೆಹಿಡಿದಿದೆ ಎಂದು ಪದವಿ ಪೂರ್ವ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.