ಬೆಂಗಳೂರು: ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಎಸಿಬಿ ಮತ್ತು ದೂರದಾರನಿಗೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.
ಕಾನೂನು ಬಾಹಿರ ಡಿ ನೋಟಿಫಿಕೇಶನ್ ಸಂಬಂಧ ತಮ್ಮ ವಿರುದ್ಧದ ಎಫ್ ಐಆರ್ ಅನ್ನು ವಜಾಗೊಳಿಸಬೇಕೆಂದು ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಎಸಿಬಿ ಮತ್ತು ದೂರುದಾರ ಖಾಸಗಿ ವಿವಿಯ ಮಾಜಿ ಉಪ ಕುಲಪತಿ ಡಾ.ಅಯ್ಯಪ್ಪ ಅವರಿಗೆ ನೊಟೀಸ್ ನೀಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಡಾ.ಶಿವರಾಮ ಕಾರಂತ ಬಡಾವಣೆಯ 257 ಎಕರೆ ಭೂಮಿ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಯಡಿಯೂರಪ್ಪ ವಿರುದ್ಧ ದೂರು ದಾಖಲಾಗಿತ್ತು. ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ಎಫ್ ಐ ಆರ್ ದಾಖಲಿಸಿದ್ದರು.
ಯಡಿಯೂರಪ್ಪ ಸಿಎಂ ಆಗಿದ್ದ ವೇಳೆಯಲ್ಲಿ 20 ವಿವಿಧ ಆದೇಶಗಳನ್ನು ಹೊರಡಿಸಿ 250 ಎಕರೆ ಜಮೀನು ಡಿನೋಟಿಫಿಕೇಶನ್ ಗೆ ಆದೇಶಿಸಿದ್ದರು ಎಂದು ಡಾ.ಅಯ್ಯಪ್ಪ ದೂರು ಸಲ್ಲಿಸಿದ್ದರು.
ಯಡಿಯೂರಪ್ಪ ವಿರುದ್ಧದ ಈ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ್ದರು.