ರಾಜ್ಯ

ವೈಯಕ್ತಿಕವಾಗಿ ಜೈಲಿನ ಬ್ಯಾರಿಕೇಡ್ ಕಾರಿಡಾರ್ ಬಳಸುತ್ತಿರುವ ಶಶಿಕಲಾ: ಮಾಜಿ ಡಿಐಜಿ ರೂಪಾ ಆರೋಪ

Sumana Upadhyaya
ನವದೆಹಲಿ: ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಎರಡೂ ಬದಿಗಳಲ್ಲಿ 120 ರಿಂದ 150 ಅಡಿ ಉದ್ದದ ಕಾರಿಡಾರ್ ಗೆ ಬ್ಯಾರಿಕೇಡ್ ಹಾಕಲಾಗಿದ್ದು, ಇದನ್ನು ವೈಯಕ್ತಿಕ ಉದ್ದೇಶಕ್ಕಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಬಳಸಲು ಜೈಲು ಸಿಬ್ಬಂದಿ ಅನುಮತಿ ಮಾಡಿಕೊಟ್ಟಿದ್ದಾರೆ ಎಂದು ಮಾಜಿ ಉಪ ಪೊಲೀಸ್ ಮಹಾ ನಿರ್ದೇಶಕಿ ಡಿ.ರೂಪಾ ಮತ್ತೊಂದು ಆರೋಪ ಮಾಡಿದ್ದಾರೆ.
ಪರಪ್ಪನ ಅಗ್ರಹಾರದ ಎರಡೂ ಬದಿಗಳಲ್ಲಿ 120ರಿಂದ 150 ಅಡಿ ಉದ್ದದ ಕಾರಿಡಾರ್ ನಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ಇದನ್ನು ಶಶಿಕಲಾ ಅವರು ಮಾತ್ರ ಖಾಸಗಿಯಾಗಿ ಬಳಸುತ್ತಿದ್ದಾರೆ. ಕಾರಿಡಾರ್ ನಲ್ಲಿರುವ 5 ಘಟಕಗಳು ಶಶಿಕಲಾ ಅವರಿಗೆ ಮಾತ್ರ ಮೀಸಲಾಗಿದೆ. ಈ ಘಟಕಗಳಲ್ಲಿ ಶಶಿಕಲಾ ತಮ್ಮ ಬಟ್ಟೆ, ಬೆಡ್ ಗಳು, ಬೆಡ್ ಶೀಟ್, ಅಡುಗೆ ಮಾಡಲು ಪಾತ್ರೆಗಳು, ನೀರಿನ ಡಿಸ್ಪೆನ್ಸರ್, ಎಲೆಕ್ಟ್ರಿಕ್ ಇಂಡಕ್ಷನ್ ಸ್ಟೌವ್, ಟೇಬಲ್ ಇತ್ಯಾದಿಗಳನ್ನು ಇರಿಸಲಾಗಿದೆ. ಈ ವಿವರಗಳನ್ನೊಳಗೊಂಡ ಪತ್ರವನ್ನು  ರೂಪಾ ಅವರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಿದ್ದಾರೆ.
ನ್ಯಾಯಾಲಯದ ಆದೇಶವಿಲ್ಲದೆ ಯಾವುದೇ ಕೈದಿಗೆ ವಿಶೇಷ ಆತಿಥ್ಯ ನೀಡುವುದು ಅಕ್ರಮ ಮತ್ತು ನ್ಯಾಯಾಂಗ ನಿಂದನೆಯಾಗುತ್ತದೆ. ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.
ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ಪ್ರತ್ಯೇಕ ಸುಖಾಸೀನವಾದ ಮಾತುಕತೆ, ಸಭೆ ನಡೆಸುವ ಕೊಠಡಿಯಿದ್ದು ಅಲ್ಲಿ ತಮ್ಮನ್ನು ಭೇಟಿ ಮಾಡಲು ಬಂದವರನ್ನು ಮಾತನಾಡಿಸುತ್ತಾರೆ. ಇದಕ್ಕೆ ಸಾಕ್ಷಿ ಬೇಕಾದರೆ ಸಿಸಿಟಿವಿ ಕ್ಯಾಮರಾ ಸಂಖ್ಯೆ 6 ಮತ್ತು 7ರಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಪರೀಕ್ಷಿಸಬಹುದು ಎನ್ನುತ್ತಾರೆ.
ಶಶಿಕಲಾಗೆ ಜೈಲಿನಲ್ಲಿ ದುಬಾರಿ ಬೆಡ್ ಮತ್ತು ಮಂಚ ನೀಡಲಾಗಿದ್ದು, ವೀಕ್ಷಣೆಗೆ ಎಲ್ ಇಡಿ ಟಿವಿ ಕೂಡ ಇದೆ. ಈ ವಿಷಯವನ್ನು ಕೋರ್ಟ್ ಗಮನಕ್ಕೆ ತರಲಾಗಿಲ್ಲ. ಶಶಿಕಲಾ ಆರೋಗ್ಯ ವಿಚಾರದಿಂದ ಈ ಸೌಲಭ್ಯ ನೀಡಲಾಗಿದೆ ಎನ್ನಬಹುದಾದರೂ ಕೂಡ ಇದನ್ನು ನ್ಯಾಯಾಲಯದ ಗಮನಕ್ಕೆ ತರದೆ ಮಾಡಲಾಗಿದೆ ಎಂದು ಪತ್ರದಲ್ಲಿ ರೂಪಾ ಆರೋಪಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ -13(1)(ಸಿ)ಯಡಿ ಇದು ಅಪರಾಧವಾಗಿದೆ. ಯಾಕೆಂದರೆ ಜೈಲಿನ ಘಟಕಗಳು/ಕಾರಿಡಾರ್ ನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸುವಂತಿಲ್ಲ ಮತ್ತು ಇತರ ವಸ್ತುಗಳಾದ ಎಲ್ ಇಡಿ ಟಿವಿ, ಪ್ರತ್ಯೇಕ ಆಹಾರ ತಯಾರಿಸುವಿಕೆ ಇತ್ಯಾದಿಗಳನ್ನು ಮಾಡುವಂತಿಲ್ಲ. ಈ ವಸ್ತುಗಳು ಕರ್ನಾಟಕ್ಕೆ ರಾಜ್ಯಕ್ಕೆ ಸೇರಿದವಾಗಿದ್ದು ಇದು ಪೊಲೀಸ್ ಮಹಾ ನಿರ್ದೇಶಕರು ಮತ್ತು ಜೈಲಿನ ಇನ್ಸ್ ಪೆಕ್ಟರ್ ಜನರಲ್ ಅವರ ಕಸ್ಟಡಿಗೆ ಒಳಪಟ್ಟದ್ದಾಗಿರುತ್ತದೆ. ಆದರೆ ಕಾರಾಗೃಹದ ಪೊಲೀಸ್ ವರಿಷ್ಠರು ಇದನ್ನು ಅಕ್ರಮವಾಗಿ ಬಳಸಲು ಅವಕಾಶ ನೀಡಿದ್ದಾರೆ. ಹೀಗಾಗಿ   ಭ್ರಷ್ಟಾಚಾರ ಕಾಯ್ದೆ 1988ರ ಸೆಕ್ಷನ್ 13(1)(ಸಿ) ಮತ್ತು 13(2) ಇದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ರೂಪಾ ಪತ್ರದಲ್ಲಿ ವಿವರಿಸಿದ್ದಾರೆ.
SCROLL FOR NEXT