ರಾಜ್ಯ

ಇನ್ನು ಮೈಸೂರು ವೀಕ್ಷಣೆಗೆ ಒಂದೇ ಟಿಕೆಟ್‌

Raghavendra Adiga
ಮೈಸೂರು: ದೀರ್ಘ ವಾರಾಂತ್ಯದ ವೇಳೆ ಉಂಟಾಗುವ ಪ್ರವಾಸಿಗರ ದಟ್ಟಣೆ ತಡೆಯಲು ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಐದು ಪ್ರವಾಸಿ ತಾಣಗಳ ವೀಕ್ಷಣೆಗೆ ಒಂದೇ ಟಿಕೆಟ್‌ ವ್ಯವಸ್ಥೆ ಜಾರಿಗೆ ತರಲು ಮೈಸೂರು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.
ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸುವ ಮೂಲಕ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿಬೆಟ್ಟ ಮತ್ತು ಕೆಆರ್‌ಎಸ್‌ ಜಲಾಶಯಕ್ಕೆ (ಬೃಂದಾವನ) ಭೇಟಿ ನೀಡಬಹುದಾಗಿದೆ.
ದಸರಾ, ಕ್ರಿಸ್‌ಮಸ್‌ ರಜೆ, ಹೊಸ ವರ್ಷ, ಬೇಸಿಗೆ ರಜೆ, ವಾರಾಂತ್ಯ ಹಾಗೂ ಸರ್ಕಾರಿ ರಜೆ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜತೆಗೆ ವಿದೇಶಿ ಪ್ರವಾಸಿಗರಿಂದ ಬೇಡಿಕೆ ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ
"ಕೇಂದ್ರೀಕೃತ ಟಿಕೆಟ್‌ ವ್ಯವಸ್ಥೆ ಜಾರಿಗೆ ತರಲು ರೂಪುರೇಷೆ ಸಿದ್ಧಪಡಿಸಲಾಗಿದೆ. ದಸರಾ ಮಹೋತ್ಸವದೊಳಗೆ ಇದು ಜಾರಿಗೆ ಬರಲಿದೆ. ಇದರಿಂದ ಪ್ರವಾಸಿಗರು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ನಿಗದಿತ ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಬಹುದು’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ತಿಳಿಸಿದರು.
ಈಗಾಗಲೇ ಚಾಮುಂಡೇಶ್ವರಿ ದೇಗುಲ, ಅರಮನೆ, ಮೃಗಾಲಯ, ಕಾರಂಜಿಕೆರೆ ವೀಕ್ಷಣೆಗೆ ಆನ್‌ಲೈನ್‌ನಲ್ಲಿ ಪ್ರತ್ಯೇಕವಾಗಿ ಟಿಕೆಟ್‌ ಖರೀದಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ಅದೆಲ್ಲವನ್ನೂ ಸೇರಿಸಿ ಆನ್ ಲೈನ್ ನಲ್ಲಿ ಒಂದೇ ಟಿಕೆಟ್ ಖರೀದಿಸುವ ಯೋಜನೆ ಈಗ ಜಾರಿಗೆ ಬರುತ್ತಿದೆ. ವರ್ಷಕ್ಕೆ ಸುಮಾರು 35 ಲಕ್ಷ ಪ‍್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ.
‘ಬುಕ್ ಮೈ ಷೋ' ಸಂಸ್ಥೆಯ ಸಹಯೋಗದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಇಂಥ ವ್ಯವಸ್ಥೆ ಎಲ್ಲೂ ಇಲ್ಲ. ದಸರಾ ವೆಬ್‌ಸೈಟ್‌ ಹಾಗೂ ಪ್ರವಾಸಿ ತಾಣಗಳ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿ ನಡೆಸಬಹುದು. ಜತೆಗೆ ಆ್ಯಪ್‌ ಕೂಡ ಇರಲಿದೆ. ಬುಕ್ ಮಾಡಿದವರ ಟಿಕೆಟ್ ಗಳನ್ನು ಇ–ಮೇಲ್‌ಗೆ ನಲ್ಲಿ ರವಾನಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ದನ್‌ ತಿಳಿಸಿದ್ದಾರೆ.
SCROLL FOR NEXT