ರಾಜ್ಯ

ಬೆಂಗಳೂರಿನಲ್ಲಿ ಆಕ್ಸಿಜನ್ ಬಲು ದುಬಾರಿ, ಉಸಿರಾಡಲು ಬಡ ರೋಗಿಗಳು ಪರದಾಟ

Lingaraj Badiger
ಬೆಂಗಳೂರು: ಇಡೀ ದೇಶವೇ 70ಕ್ಕಿಂತ ಹೆಚ್ಚು ಮಕ್ಕಳನ್ನು ಬಲಿ ಪಡೆದ ಗೋರಖ್ ಪುರ ಆಸ್ಪತ್ರೆ ದುರಂತದ ಬಗ್ಗೆ ಚರ್ಚೆ ಮಾಡುತ್ತಿದ್ದರೆ, ನಮ್ಮ ಬೆಂಗಳೂರಿನಲ್ಲೂ ಅಂತಹದ್ದೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ವೈದ್ಯರು ಮತ್ತು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಹೌದು, ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಕೈಗೆಟಕುವ ದರದಲ್ಲಿ ಆಕ್ಸಿಜನ್ ಮತ್ತು ಕಾನ್ಸ್ ಟೆಟರ್ಸ್ ಗಳು ಸಿಗುತ್ತಿಲ್ಲ. ಇದರಿಂದಾಗಿ ಅನೇಕ ರೋಗಿಗಳು ವಿಶೇಷವಾಗಿ ಮನೆಯಲ್ಲಿಯೇ ವೈದ್ಯಕೀಯ ಆರೈಕೆಗಾಗಿ ವೈದ್ಯಕೀಯ ವೆಚ್ಚಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ.
45 ವರ್ಷದ ಮಹಿಳೆ ನಾಗಮ್ಮ ಎಂಬುವವರು ಗರ್ಭಕೋಶದ ಆಪರೇಷನ್ ಮಾಡಿಸಿಕೊಂಡ ನಂತರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಹೊಂದಲು ಸಾಧ್ಯವಾಗದೇ ಪ್ರತಿ ಮೂರು ದಿನಕ್ಕೊಮ್ಮೆ ಸಮೀಪದ ಆಸ್ಪತ್ರೆಗೆ ಹೋಗಿ ಬರುತ್ತಿದ್ದಾರೆ.
ಬಡ ರೋಗಿಗಳ ಸಹಾಯಕ್ಕಾಗಿ ಸರ್ಕಾರ ಸಬ್ಸಿಡಿ ದರದಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಲು ಒಂದು ಏಜೆನ್ಸಿಯನ್ನು ಆರಂಭಿಸಬೇಕು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಪಂಕಜ್ ಸಿಂಘಾಯ್ ಅವರು ಹೇಳಿದ್ದಾರೆ.
ಬಡ ರೋಗಿಗಳು ಸಾಕಷ್ಟು ಆಕ್ಸಿಜನ್ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಆಕ್ಸಿಜನ್ ಸಿಲಿಂಡರ್ ವಿತರಣೆಗಾಗಿ ಸೂಕ್ತ ವ್ಯವಸ್ಥೆ ಮಾಡಿದರೆ ಈ ಸಮಸ್ಯೆ ಇರುವುದಿಲ್ಲ. ಶಸ್ತ್ರ ಚಿಕಿತ್ಸೆಯ ನಂತರ ಹಲವು ರೋಗಿಗಳು ಮನೆಯಲ್ಲಿಯೇ ಸುಮಾರು 6 ತಿಂಗಳಿಂದ ಒಂದು ವರ್ಷದವರೆಗೆ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯವಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಜೀವನಪೂರ್ತಿ ಆಕ್ಸಿಜನ್ ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಆಕ್ಸಿಜನ್ ತುಂಬಾ ದುಬಾರಿಯಾಗಿರುವುದರಿಂದ ಬಡ ರೋಗಿಗಳಿಗೆ ಇದು ಸಾಧ್ಯವಾಗುವುದಿಲ್ಲ ಎಂದು ಡಾ.ಪಂಕಜ್ ತಿಳಿಸಿದ್ದಾರೆ.
SCROLL FOR NEXT