ರಾಜ್ಯ

ಇನ್ನು ಮುಂದೆ ಅಧೀನ ಕಾಲೇಜುಗಳಲ್ಲಿ ಸಿನಿಮಾ ಶೂಟಿಂಗ್ ಇಲ್ಲ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ

Sumana Upadhyaya
ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಅಂಗಸಂಸ್ಥೆಯಾಗಿರುವ ರಾಜ್ಯದ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇನ್ನು ಮುಂದೆ ಸಿನಿಮಾ ಶೂಟಿಂಗ್ ಸೇರಿದಂತೆ ಯಾವುದೇ ಪಠ್ಯೇತರ ಚಟುವಟಿಕೆ ನಡೆಸಬಾರದೆಂದು ವಿದ್ಯಾಲಯ ಆದೇಶ ಹೊರಡಿಸಿದೆ. 
ತರಗತಿ ನಡೆಯುತ್ತಿರುವ ಸಂದರ್ಭದಲ್ಲಿ ಸಿನಿಮಾ ಶೂಟಿಂಗ್ ಮಾಡುವ ತಂಡಗಳು ತೊಂದರೆಯುಂಟುಮಾಡುತ್ತಾರೆ ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ವಿದ್ಯಾಲಯ ಕೈಗೊಂಡಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ವಿಶ್ವವಿದ್ಯಾಲಯದ ಅಧಿಕೃತ ಮೂಲಗಳು,ಕಾಲೇಜು ಸಮಯಗಳಲ್ಲಿ ಸಿನಿಮಾ ಶೂಟಿಂಗ್ ಇತ್ಯಾದಿಗಳು ನಡೆಯುವುದರಿಂದ ಕಾಲೇಜು ಕ್ಯಾಂಪಸ್ ನಲ್ಲಿ ಭಾರೀ ಗದ್ದಲವುಂಟಾಗುತ್ತದೆ. ಇದರಿಂದ ವಾತಾವರಣ ಹಾಳಾಗುತ್ತದೆ ಎಂದು ವಿದ್ಯಾರ್ಥಿಗಳಿಂದ ಮತ್ತು ಉಪನ್ಯಾಸಕರಿಂದ ಹಲವು ಬಾರಿ ದೂರುಗಳು ಬಂದಿವೆ. ಹೀಗಾಗಿ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದೆಂದು ನಾವು ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದ್ದೇವೆ ಎಂದಿವೆ.
ಕಾಲೇಜುಗಳಲ್ಲಿ ಶೂಟಿಂಗ್ ಇರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತರಗತಿಗೆ ಬಾರದೆ ಶೂಟಿಂಗ್ ನೋಡಲು ಹೋಗುತ್ತಾರೆ ಎನ್ನುತ್ತಾರೆ ಬೆಂಗಳೂರಿನ ಪ್ರಖ್ಯಾತ ಕಾಲೇಜೊಂದರ ಸಿಬ್ಬಂದಿ. ಇತ್ತೀಚೆಗೆ ಸಿನಿಮಾ ತಂಡವೊಂದು ಕಾಲೇಜಿನಲ್ಲಿ 10 ದಿನಗಳ ಕಾಲ ಶೂಟಿಂಗ್ ಗೆಂದು ಬಿಡಾರ ಹೂಡಿತ್ತು. ಈ ಹತ್ತೂ ದಿನಗಳು ಕೂಡ ವಿದ್ಯಾರ್ಥಿಗಳ ಹಾಜರಾತಿ ಶೇಕಡಾ 20ಕ್ಕಿಂತಲೂ ಕಡಿಮೆಯಿದ್ದವು ಎನ್ನುತ್ತಾರೆ ಅವರು.
ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ಮೂರನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿ ರಾಹುಲ್ ಎಂ.ಬೊಗಸೆ, ಸಿನಿಮಾ ಶೂಟಿಂಗ್ ಇದ್ದರೆ ನಮಗೆ ತರಗತಿಯಲ್ಲಿ ಪಾಠ ಕೇಳಲು ಗಮನ ಬರುವುದಿಲ್ಲ. ಕಾಲೇಜಿಗೆ ಬಂದಾಗ ಪಾಠ ಕೇಳಬೇಕು, ಓದಬೇಕು, ಅಷ್ಟೇ ನಮಗೆ ಗೊತ್ತಿರುವುದು. ಅದಕ್ಕೆ ತೊಂದರೆಯಾಗಬಾರದು ಎನ್ನುತ್ತಾರೆ.
SCROLL FOR NEXT