ಡಾ.ಎಂ.ಎಂ.ಕಲ್ಬುರ್ಗಿ ತಮ್ಮ ಪತ್ನಿಯೊಂದಿಗೆ(ಸಂಗ್ರಹ ಚಿತ್ರ)
ಧಾರವಾಡ: ಖ್ಯಾತ ವಿದ್ವಾಂಸ ಡಾ. ಎಂ.ಎಂ. ಕಲ್ಬುರ್ಗಿಯವರನ್ನು ಹತ್ಯೆಯಾಗಿ ನಿನ್ನೆಗೆ ಭರ್ತಿ ಎರಡು ವರ್ಷವಾಗಿದೆ. ಆದರೂ ಇದುವರೆಗೆ ಕೊಲೆ ಮಾಡಿದವರು ಯಾರು ಎಂದು ಪತ್ತೆಯಾಗಿಲ್ಲ. ಆರೋಪಿಗಳನ್ನು ಪತ್ತೆಹಚ್ಚಿ ತಮಗೆ ನ್ಯಾಯ ದೊರಕಿಸಬಹುದೆಂದು ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದ ಅವರ ಕುಟುಂಬ ಸದಸ್ಯರಿಗೆ ನಿರಾಸೆಯಾಗಿದೆ.
2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದ ಅವರ ಮನೆಗೆ ತೆರಳಿದ ಇಬ್ಬರು ದುಷ್ಕರ್ಮಿಗಳು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಘಟನೆಯಾಗಿ ಎರಡು ವರ್ಷಗಳೇ ಕಳೆದಿವೆ. ಸರ್ಕಾರದಿಂದ ಭರವಸೆ ಸಿಗುತ್ತಲೇ ಇದೆ ಹೊರತು ಕೇಸಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಅವರ ಕುಟುಂಬಿಕರು ಆರೋಪಿಸುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕಲ್ಬುರ್ಗಿಯವರ ಪುತ್ರ ಶ್ರೀವಿಜಯ್, ನನಗೆ ಸರ್ಕಾರ ಮತ್ತು ನ್ಯಾಯದ ಮೇಲೆ ನಂಬಿಕೆ, ಗೌರವ ಇದೆ. ಆದರೆ ಕೇಸಿನ ವಿಚಾರಣೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಳಂಬ ತೋರಿರುವುದು ನಿರಾಶೆ ಉಂಟು ಮಾಡಿದೆ. ನಮಗೆ ನ್ಯಾಯ ಸಿಗಲು ಕಾನೂನಿನ ಬೇರೆ ದಾರಿ ಹುಡುಕಬೇಕಾಗಿದೆ ಎಂದರು.
ಈ ಕೇಸನ್ನು ರಾಜಕೀಯಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮಗೆ ನ್ಯಾಸ ಸಿಗಬೇಕಷ್ಟೆ. ಕಳೆದ ಏಳು ತಿಂಗಳಲ್ಲಿ ನಮ್ಮನ್ನು ಯಾವ ತನಿಖಾಧಿಕಾರಿಗಳು ಕೂಡ ಸಂಪರ್ಕಿಸಿಲ್ಲ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಆದರೆ ಕೊಲೆ ಮಾಡಿದವರ ಬಗ್ಗೆ ನಮಗೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನುತ್ತಾರೆ ಶ್ರೀ ವಿಜಯ್.
ಇನ್ನು ನಾಲ್ಕು ತಿಂಗಳು ಕಾಯುತ್ತೇವೆ. ಅಷ್ಟೊರಳಗೆ ನ್ಯಾಯ ಸಿಗಲಿಲ್ಲವೆಂದರೆ ಸರ್ಕಾರ ಮತ್ತು ತನಿಖಾ ಸಂಸ್ಥೆಯ ವಿಳಂಬ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ. ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ ಎಂದು ಮುಖ್ಯಮಂತ್ರಿಗಳು ಹೇಳಿರುವುದನ್ನು ನಾವು ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಓದಿದ್ದೇವೆ. ಆದರೆ ಅಂತಿಮ ಹಂತವೆಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಕಲ್ಬುರ್ಗಿಯವರ ಸಂಬಂಧಿಕರು ಹೇಳುತ್ತಾರೆ.
ತನಿಖಾ ಸಂಸ್ಥೆಗಳ ನಡುವೆ ಸಂವಹನ ಕೊರತೆಯೇ ಪ್ರಮುಖ ಹಿನ್ನಡೆಯಾಗಿದೆ ಎನ್ನುತ್ತಾರೆ ಪ್ರೊ.ಗಣೇಶ್ ಡಿ.ದೆವಿ.