ಬೆಳಗಾವಿ: ಬೆಳಗಾವಿಯ ಪಿ.ಬಿ.ರಸ್ತೆ ಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಹೂವಿನ ವ್ಯಾಪಾರಿಯೊಬ್ಬರ ಕಣ್ಣಿಗೆ ಮೆಣಸಿನ ಪುಡಿ ಎರಚಿ 24 ಲಕ್ಷ ರೂ.ನಗದು ದೋಚಿದ ಪ್ರಕರಣ ನಡೆದಿದೆ. ತುಮಕೂರು ಜಿಲ್ಲೆ ಶಿರಾ ಮೂಲದ ನಾರಾಯಣ ಮದ್ದಪ್ಪ ಎನ್ನುವವರ ಹಣವನ್ನು ದರೋಡೆಕೋರರುೀಗರಿಸಿದ್ದಾರೆ.
ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಹೂವು ಸರಬರಾಜು ಮಾಡುವ ನಾರಾಯಣ ಅಲ್ಲಿನ ವ್ಯಾಪಾರಸ್ಥರಿಂದ ಹಣ ಪಡೆದು ಹೋಗುವ ಸಲುವಾಗಿ ಬಂದಿದ್ದರು. ಮುಖ್ಯ ಬಸ್ ನಿಲ್ದಾಣದ ಎದುರಿನ ಅಪೋಲೋ ವಸತಿ ಗೃಹದಲ್ಲಿ ತಂಗಿದ್ದು ಊರಿಗೆ ಹಿಂತಿರುಗಲು ಬಸ್ ಗಾಗಿ ಕಾಯುವಾಗ ಈ ಘಟನೆ ನಡೆದಿದೆ.ಪಲ್ಸರ್ ಬೈಕ್ ನಲ್ಲಿ ಬಂದ ಆರೋಪಿಗಳು ನಾರಾಯಣ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಹಣ ದೋಚಿದ್ದಾರೆ.
ಘಟನಾ ವಿವರವು ಹೋಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಸಹ ವಾಹನ ನೊಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುತ್ತಿಲ್ಲ. ಆದರೆ ಸ್ಥಳೀಯರೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಸುಳಿವಿದ್ದು ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಡಿಸಿಪಿ ಅಮರನಾಥ ರೆಡ್ಡಿ ಹೇಳಿದ್ದಾರೆ..