ಬೆಂಗಳೂರು: 'ಹಾಯ್ ಬೆಂಗಳೂರು' ಪತ್ರಿಕೆ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಂಧನಕ್ಕೂ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಶುಕ್ರವಾರಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಸಿಸಿಬಿ ಪೊಲೀಸರು ರವಿ ಬೆಳಗೆರೆ ಅವರನ್ನು ಬಂಧಿಸಿದ್ದು, ಈ ಕುರಿತು ಇಂದು ವಿಕಾಸಸೌಧದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಸುವ ವೇಳೆ ತಾಹೀರ್ ನನ್ನು ಪೊಲೀಸರು ಬಂಧಿಸಿದಾಗ ಸುಪಾರಿ ಕಿಲ್ಲರ್ ಶಶಿಧರ್ ಮುಂಡೇವಾಡಗೆ ಗನ್ ಮಾರಾಟ ಮಾಡಿದ್ದ ಎಂಬ ಮಾಹಿತಿ ಸಿಕ್ಕಿದೆ. ತಾಹೀರ್ ವೆಪನ್ ಸೆಲ್ಲರ್ ಮಾತ್ರ. ಆದರೆ ಬೆಳಗೆರೆ ಬಂಧನಕ್ಕೂ ಗೌರಿ ಹತ್ಯೆ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದರು.
ರವಿ ಬೆಳಗೆರೆ ಅವರ ಬಂಧನ ವಿಚಾರ ಎಲ್ಲವೂ ಪೊಲೀಸ್ ಪ್ರಕ್ರಿಯೆ, ಮಾಹಿತಿ ಇದ್ದ ಕಾರಣದಿಂದಲೇ ಈ ಪ್ರಕ್ರಿಯೆ ನಡೆದಿದೆ. ಮಾಹಿತಿ ಇಲ್ಲದೇ ಏನೂ ಮಾಡಲು ಆಗುವುದಿಲ್ಲ. ಅಲ್ಲದೇ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಲ್ಯಾಬ್ ರಿಪೋರ್ಟ್ ಬರುವವರೆಗೆ ಕಾಯಬೇಕು. ಕಳೆದ ಭಾನುವಾರ ತಾಹೀರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು, ಯಾರು ಯಾರಿಗೆ ಗನ್ ಮಾರಾಟ ಮಾಡಲಾಗಿದೆ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಮಾಡಿದಾಗ ಶಶಿಧರ್ ಮುಂಡೆವಾಡಿಗೆ ಗನ್ ಮಾರಾಟ ಮಾಡಿರುವ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧಾರಿಸಿ ಶಶಿಧರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಿಸಿಬಿಗೆ ಕೆಲವು ಮಾಹಿತಿ ಸಿಕ್ಕಿದೆ. ಅದರಂತೆ ಇಂದು ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಇನ್ನು ಶಶಿಧರ್ ಮುಂಡೇವಾಡಿ ಬಳಸಿದ್ದ ಗನ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಆ ಗನ್ ಎಲ್ಲೆಲ್ಲಿ ಬಳಕೆಯಾಗಿದೆ ಎನ್ನುವ ಮಾಹಿತಿ ಲಭಿಸಲಿದೆ. ಬೆಳಗೆರೆ ಬಂಧನದ ಹಾಗೂ ತನಿಖೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರು ಅಥವಾ ಸಿಸಿಬಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.