ಮಯೂರ ವರ್ಮ ವೇದಿಕೆಯಲ್ಲಿ ಜಮಾಯಿಸಿದ ಜನರು
ಕಾರವಾರ: ಮೂರು ದಿನಗಳ ಕರಾವಳಿ ಉತ್ಸವ ಕಾರವಾರದಲ್ಲಿ ನಿನ್ನೆ ಆರಂಭವಾಗಿದೆ. ನೂರಾರು ಕಲಾವಿದರು ಉತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ನಿನ್ನೆ ಅಪರಾಹ್ನ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಜಿಲ್ಲಾ ರಂಗಮಂದಿರದಲ್ಲಿ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.
ಕಮಾಂಡರ್ ಅಡ್ಮರಲ್ ಕೆ.ಜೆ.ಕುಮಾರ್, ರವೀಂದ್ರ ನಾಥ ಠಾಕೋರ್ ಬೀಚ್ ಹತ್ತಿರ ವಾರ್ ಶಿಪ್ ಮ್ಯೂಸಿಯಮ್ ಗಾರ್ಡನ್ ಬಳಿ ಫಲ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು.
ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ್ ನಾಯಕ್ ಉಪಸ್ಥಿತರಿದ್ದರು.
ಹೂವುಗಳಿಂದ ವಿನ್ಯಾಸಗೊಳಿಸಿದ ಜಿರಾಫೆ, ನವಿಲು, ಸುಖೊಯ್ ಯುದ್ಧ ವಿಮಾನ, ಹೂವಿನಿಂದ ನಿರ್ಮಿಸಲಾದ ಹೃದಯ ವಿನ್ಯಾಸ, ಹಾರ್ನ್ಬಿಲ್ ಜನರನ್ನು ಆಕರ್ಷಿಸಿದವು. ಕಾರವಾರದ ಹತ್ತಿರ ಸದಾಶಿವಗಡದ ಹಣ್ಣಿನ ವಿನ್ಯಾಸದ ಕಲಾವಿದರು ಹಣ್ಣಿನಲ್ಲಿ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗ್ಡೆ, ಪ್ರಧಾನಿ ನರೇಂದ್ರ ಮೋದಿಯವರನ್ನು ವಿನ್ಯಾಸಗೊಳಿಸಿದ್ದಾರೆ. ಅದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿದೆ.
ಮಹಿಳೆಯರಿಗೆ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು 40ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.