ರಾಜೇಂದ್ರಪುರ ಅರಣ್ಯ ಪ್ರದೇಶದಲ್ಲಿ ವಶಪಡಿಸಿಕೊಂಡ 40 ವರ್ಷದ ಆನೆಯೊಂದಿಗೆ ಬೇರೆ ಆನೆಗಳು
ರಾಜೇಂದ್ರಪುರ(ಸಕಲೇಶಪುರ): ಸುಮಾರು ನಾಲ್ಕೂವರೆ ಗಂಟೆಗಳ ಕಾರ್ಯಾಚರಣೆ ನಂತರ ಅರಣ್ಯಾಧಿಕಾರಿಗಳು ರಾಜೇಂದ್ರಪುರ ಅರಣ್ಯದಲ್ಲಿ 40 ವರ್ಷದ ಆನೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಅಭಿಮನ್ಯು ಎಂಬ ಸಾಧು ಆನೆಯ ಮೇಲೆ 35 ಅಡಿ ದೂರದಲ್ಲಿ ಕುಳಿತು ಶೂಟರ್ ವೆಂಕಟೇಶ್ ಹಿಡಿಯುವಲ್ಲಿ ಯಶಸ್ವಿಯಾದರು. ಯೋಗೀಶ್ ಎಂಬ ಕಾಫಿ ಎಸ್ಟೇಟ್ ನೌಕರನನ್ನು ಕಳೆದ ಬುಧವಾರ ರಾತ್ರಿ ಕಣಿಗೆರೆ ಎಂಬಲ್ಲಿ ಈ ಆನೆ ಕೊಂದು ಹಾಕಿತ್ತು.
ಕಾರ್ಯಾಚರಣೆ ಆರಂಭಕ್ಕೂ ಮುನ್ನ ಹಿರಿಯ ಅರಣ್ಯಾಧಿಕಾರಿಗಳು ಸಾಧು ಆನೆಗಳಾದ ಅಭಿಮನ್ಯು, ವಿಕ್ರಮ, ಕೃಷ್ಣಾ ಮತ್ತು ಗೋಪಾಲಸ್ವಾಮಿ ಮತ್ತು ಹರ್ಷಕ್ಕೆ ಪೂಜೆ ಸಲ್ಲಿಸಿ ಕಾರ್ಯಾಚರಣೆ ಆರಂಭಿಸಿದ್ದರು.
ರಾಜೇಂದ್ರಪುರದ ಹತ್ತಿರ ಅಬ್ಬನ ಅರಣ್ಯದಲ್ಲಿ ಆನೆ ಕಾಣಿಸಿಕೊಂಡಿತು. ಮನುಷ್ಯರನ್ನು ಕಂಡಕೂಡಲೇ ಆನೆ ಓಡಿಹೋಗಲಾರಂಭಿಸಿತು. ಅಷ್ಟು ಹೊತ್ತಿಗೆ ಡಾ.ಮುಜೀಬಿ ರೆಹಮಾನ್ ಮತ್ತು ಡಾ. ಪ್ರಯಾಗ್ ಸ್ಥಳಕ್ಕೆ ಧಾವಿಸಿ ಚುಚ್ಚುಮದ್ದನ್ನು ನೀಡಿ ಶಕ್ತಿಯನ್ನು ಕುಗ್ಗಿಸಿದರು. ಅರಣ್ಯ ಸಿಬ್ಬಂದಿ ಆನೆಯ ಕಾಲುಗಳನ್ನು ಕಟ್ಟಿಹಾಕಿದರು. ಅದಕ್ಕೆ ಇತರ ಸಿಬ್ಬಂದಿ ಕೂಡ ನೆರವಿಗೆ ಬಂದರು.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆಗೆ ಮಾತನಾಡಿದ ಎಪಿಸಿಸಿಎಫ್ ಜಯರಾಮ್, ಆನೆಗಳ ಕಾರಿಡಾರನ್ನು ನಿರ್ಮಿಸಿ ಆನೆಗಳ ಉಪಟಳವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆನೆಗಳ ಕಾರಿಡಾರ್ ಭೂಮಿ ಛಿದ್ರಗೊಂಡಿದೆ. ಆನೆಗಳ ಉಪಟಳವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಕಲೇಶಪುರ ಹತ್ತಿರ ಆನೆಗಳ ಶಿಬಿರ ಸ್ಥಾಪಿಸಲು ಸರ್ಕಾರ ಸಾಕಷ್ಟು ಹಣವನ್ನು ಬಿಡುಗಡೆ ಮಾಡಿದೆ. ವಶಕ್ಕೆ ತೆಗೆದುಕೊಂಡ ಆನೆಯನ್ನು ದುಬಾರೆ ಆನೆಗಳ ಶಿಬಿರಕ್ಕೆ ಕಳುಹಿಸಲಾಯಿತು.