ಬೆಂಗಳೂರು: ಸಹೋದ್ಯೋಗಿ ಪತ್ರಕರ್ತರೊಬ್ಬರ ಕೊಲೆಗೆ ಸುಪಾರಿ ನೀಡಿದ ಪ್ರಕರಣ ಸಂಬಂಧ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಖ್ಯಾತ ಪತ್ರಕರ್ತ ರವಿ ಬೆಳಗೆರೆಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮತ್ತೊಂದು ಬಂಧನ ವಾರಂಟ್ ಜಾರಿಯಾಗಿದೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮಧ್ಯಾಂತರ ಜಾಮೀನು ಪಡೆದುಕೊಂಡ ಬೆನ್ನಲ್ಲೇ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗುರುವಾರ ಅರೆಸ್ಟ್ ವಾರಂಟ್ ಜಾರಿ ಮಾಡಿ, ಕೂಡಲೇ ರವಿ ಬೆಳಗೆರೆಯನ್ನು ದಸ್ತಗಿರಿ ಮಾಡಿ ಕೋರ್ಟ್ ಗೆ ಹಾಜರುಪಡಿಸುವಂತೆ ಸಂಜಯನಗರ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಏಳು ವರ್ಷಗಳ ಹಿಂದೆ ಬೆಳಗೆರೆ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇದೀಗ ಅರೆಸ್ಟ್ ವಾರಂಟ್ ಅನ್ನು ಜಾರಿ ಮಾಡಿದ್ದು, 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ 7 ವರ್ಷಗಳ ಹಿಂದೆ ಮಹಿಳೆಯೊಬ್ಬರ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ಈ ವರದಿಯಿಂದಾಗಿ ತಮ್ಮ ತೇಜೋವಧೆಯಾಗಿದೆ. ತಮ್ಮ ತೇಜೋವಧೆ ಮಾಡಲೆಂದೇ ವರದಿ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಮಹಿಳೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಸಾಕಷ್ಟು ಬಾರಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತಾದರೂ, ಬೆಳಗೆರೆಯವರು ಸಬೂಬು ಹೇಳಿ ಪ್ರತಿ ಬಾರಿಯೂ ಕೋರ್ಟ್ ವಿಚಾರಣೆಗೆ ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಬೆಳಗೆರೆಯನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಳ್ಳುವಂತೆ ಸಂಜಯನಗರ ಪೊಲೀಸರಿಗೆ ನಿರ್ದೇಶನ ನೀಡಿದೆ. ಪೊಲೀಸರು ಬಾಡಿ ವಾರಂಟ್ ಪಡೆದು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳಗೆರೆ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಸುಪಾರಿ ಪ್ರಕರಣದಲ್ಲಿ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರವಷ್ಟೇ ಕೋರ್ಟ್ ರವಿ ಬೆಳಗೆರೆಗೆ 3 ದಿನ ಷರತ್ತು ಬದ್ಧ ಮಧ್ಯಾಂತರ ಜಾಮೀನು ನೀಡಿತ್ತು.