ಬಾಗಲಕೋಟೆ: ಭಯೋತ್ಪಾದಕ ಆಗುವಂತೆ ಒತ್ತಡ, ಯುವಕನಿಂದ ಆತ್ಮಹತ್ಯೆಗೆ ಯತ್ನ
ಬಾಗಲಕೋಟೆ; ಉಗ್ರರು ತನಗೆ ಭಯೋತ್ಪಾದಕ ಆಗುವಂತೆ ಕಿರುಕುಳ ನೀಡುತ್ತಿದ್ದಾರೆ. ಕಾಲೇಜ್ ಗೆ ಬಾಂಬ್ ಇಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಶರಣಪ್ಪ ನಾಗರಾಳ ತನಗೆ ಉಗ್ರರು ಭಯೋತ್ಪಾದಕ ಆಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಗಜೇಂದ್ರಗಡದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ನಾನು ಭಯೋತ್ಪಾದಕನಾಗುವುದಿಲ್ಲ. ಎಂದು ಹೇಳಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಚಾರ ತಿಳಿದ ಬಾಗಲಕೋಟೆ ಎಸ್.ಪಿ. ರಿಷ್ಯಂತ್ ಆಸ್ಪತ್ರೆಗೆ ಭೇಟಿ ನೀಡಿ ಯುವಕ ಶರಣಪ್ಪ ಮತ್ತು ಕುಟುಂಬಸ್ಥರ ವಿಚಾರಣೆ ನಡೆಸಿದ್ದಾರೆ. ಮಹ್ಮದ್ ರಫಿ,ಇಸ್ಮಾಯಿಲ್ ಎನ್ನುವವನು ತನಗೆ ಭಯೋತ್ಪಾದನೆ ಸಂಘಟನೆಗೆ ಸೇರುವಂತೆ ಕಾಲೇಜ್‌ಗೆ ಬಾಂಬ್ ಇಡುವಂತೆ ಬೆದರಿಸುತ್ತಿದ್ದರು ಎಂದ ಆರೋಪಿಸಿದ ಯುವಕ ಯಾವುದೇ ಮಾಹಿತಿಯನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಆದರೆ ಯುವಕನ ಕುಟುಂಬಸ್ಥರು ಈ ವಿಚಾರವನ್ನು ತಿರಸ್ಕರಿಸಿದ್ದು ತನ ಆರೋಗ್ಯ ಸರಿ ಇಲ್ಲ, ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ. ಮೇಲಾಗಿ ಆತನಿಗೆ ಯಾವುದೇ ಭಯೋತ್ಪಾದಕರ ಜತೆ ಸಂಪರ್ಕ ಇಲ್ಲ ಎಂದಿದ್ದಾರೆ.
ಯುವಕ ಶರಣಪ್ಪ ಕಲಿಯುತ್ತಿರುವ ಕಾಲೇಜಿನಲ್ಲಿ ವಿಚಾರಣೆ ನಡೆಸುತ್ತೇವೆ. ತನಿಖೆ ನಂತರ ಪರಿಪೂರ್ಣ ಮಾಹಿತಿ ಸಿಗಲಿದೆ ಎಂದು ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.