ರಾಜ್ಯ

ಹೊನ್ನಾವರದ ಬಾಲಕಿ ಕೈಯಲ್ಲಿನ ಗಾಯಗಳು ಸ್ವಯಂಕೃತ: ಪೊಲೀಸರು

Sumana Upadhyaya
ಕಾರವಾರ: ಶಾಲಾ ಬಾಲಕಿ ಮೇಲೆ ಯಾವುದೇ ದಾಳಿಗೆ ಯತ್ನಿಸಿಲ್ಲ ಅಥವಾ ಹಿಂಸೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡುತ್ತಿದ್ದಂತೆ ಹೊನ್ನಾವರದಲ್ಲಿ ಶಾಲಾ ಬಾಲಕಿ ಮೇಲೆ ನಡೆದ ಹಲ್ಲೆ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿತು. 
ಹೊನ್ನಾವರ ತಾಲ್ಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಕಳೆದ ವಾರ ಶಾಲಾ ಬಾಲಕಿ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ತನಿಖೆ ವೇಳೆ ಪೊಲೀಸರು ಮತ್ತು ವೈದ್ಯರು, ಬಾಲಕಿಯ ಕೈ ಮೇಲಿನ ಗಾಯದ ಗುರುತುಗಳು ಆಕೆಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಬಾಲಕನಿಂದ ಭೀತಿಗೊಳಗಾಗಿ ಮಾಡಿಕೊಂಡ ಸ್ವಯಂಕೃತ ಗಾಯಗಳು  ಎಂದು ಹೇಳಿದ್ದಾರೆ.
ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಬಾಲಕಿಯ ಕೈ ಮೇಲಿನ ಗಾಯದ ಗುರುತುಗಳು ಆಕೆ ಸಿಟ್ಟು, ದ್ವೇಷದಿಂದ ತಾನೇ ಮಾಡಿಕೊಂಡ ಗಾಯಗಳಾಗಿದ್ದು ಆಕೆಯನ್ನು ಸಮಾಲೋಚನೆಗೊಳಪಡಿಸಿದಾಗ ಇಡೀ ಪ್ರಕರಣವನ್ನು ಬಾಲಕಿ ವಿವರಿಸಿದ್ದಾಳೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಬಾಲಕಿಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಗಣೇಶ್ ಈಶ್ವರ್ ನಾಯಕ್ ಎಂಬವವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿ ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಬಾಲಕಿ ಪ್ರತಿನಿತ್ಯ 8 ಕಿಲೋ ಮೀಟರ್ ನಡೆದುಕೊಂಡು ಸಂಶಿ ಅರಣ್ಯ ಪ್ರದೇಶದಲ್ಲಿ ಹೈಸ್ಕೂಲ್ ಗೆ ಹೋಗುತ್ತಾಳೆ. ಕಳೆದ ನಾಲ್ಕೈದು ತಿಂಗಳಿನಿಂದ ಪಕ್ಕದ ಗ್ರಾಮದ ಗಣೇಶ್ ಈಶ್ವರ್ ನಾಯಕ್ ಎಂಬುವವನು ಕಾರಲ್ಲಿ ಅಥವಾ ಬೈಕಲ್ಲಿ ಹೋಗುವಾಗ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ತನ್ನ ವಾಹನದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದನು ಎಂದು ಬಾಲಕಿ ಸಮಾಲೋಚನೆ ವೇಳೆ ಹೇಳಿದ್ದಾಳೆ.
ಗಣೇಶ್ ನಾಯಕ್ ನ ಭಯದಿಂದ ಬಾಲಕಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಳು, ತನ್ನ ತಾಯಿಗೆ ವಿಷಯ ತಿಳಿಸಿದ್ದಳು. ಕಳೆದ ಗುರುವಾರ ಶಾಲೆಯಲ್ಲಿ ಪರೀಕ್ಷೆ ನಡೆಯುವ ವಿಷಯವನ್ನು ಗೆಳತಿಯರಿಂದ ತಿಳಿದುಕೊಂಡು ಶಾಲೆಗೆ ಹೋದಳು, ಆದರೆ ಗಣೇಶ್ ನ ಭೀತಿಯಿಂದ ಆತ ಕಿರುಕುಳ ಮಾಡಬಹುದೆಂದು ತಾನಾಗಿಯೇ ಎರಡೂ ಕೈಗಳಿಗೆ ಗುಂಡುಪಿನ್ನುಗಳಿಂದ ಚುಚ್ಚಿದ್ದಳು.
SCROLL FOR NEXT