ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯಿಂದ ಸ್ಫೂರ್ತಿ ಪಡೆದ ನವ ವಧು-ವರರು ಪರಿಸರ ಸ್ನೇಹಿ ಮದುವೆ ಮಾಡಿಕೊಂಡು ಆದರ್ಶ ಮೆರೆದಿದ್ದಾರೆ.
ಡಿಸೆಂಬರ್ 4ರಂದು ಮಣಿಪಾಲದಲ್ಲಿ ಮೊಟ್ಟ ಮೊದಲ ಪರಿಸರ ಸ್ನೇಹಿ ಮದುವೆ ಸಮಾರಂಭವೊಂದು ನೆರವೇರಿತು. ಸಮಾರಂಭದಲ್ಲಿ ಪರಿಸರಕ್ಕೆ ಹಾನಿಯಾಗುವಂತಾ ಪ್ಲಾಸ್ಟಿಕ್ ಮತ್ತು ಇನ್ನಿತರ ವಸ್ತುಗಳನ್ನು ಬಳಸಲಿಲ್ಲ. ಇಂತಹ ಪರಿಸರ ಸ್ನೇಹಿ ಮದುವೆ ಮಾಡಿಕೊಂಡವರು ವರುಣ್ ಮತ್ತು ಪ್ರತಿಭಾ.
ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ಎಸ್ಎಂಎಸ್ ಮತ್ತು ಇ-ಮೇಲ್ ನಲ್ಲಿ ಸಂದೇಶ ಕಳಿಸುವ ಮೂಲಕ ಮದುವೆ ಸಮಾರಂಭಕ್ಕೆ ಬಂಧುಗಳು ಹಾಗೂ ಮಿತ್ರರನ್ನು ಆಹ್ವಾನಿಸಿದ್ದರು. ಇನ್ನು ಯಾರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿಲ್ಲವೋ ಅವರಿಗಾಗಿ ಮಾತ್ರ 50 ಆಹ್ವಾನ ಪತ್ರಿಕೆ ಮುದ್ರಿಸಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ತಾವು ಕಳುಹಿಸಿದ ಸಂದೇಶದಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ವಿವಾಹ ಸಭಾಂಗಣದಲ್ಲೂ ಹಸಿರು ರಕ್ಷಿಸಿ, ಪರಿಸರ ಉಳಿಸಿ ಎಂಬ ಕೆಲ ಪೋಸ್ಟರ್ ಗಳನ್ನು ಇರಿಸಲಾಗಿತ್ತು. ಈ ಪರಿಸರ ಸ್ನೇಹಿ ವಿವಾಹದ ಪ್ರಮಾಣ ಪತ್ರವನ್ನು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ನೀಡಿದರು.