ರಾಜ್ಯ

ಹೊರ ವರ್ತುಲ ರಸ್ತೆ ದಾಟಲು ಹರಸಾಹಸಪಡುತ್ತಿರುವ ಶಾಲಾ ಮಕ್ಕಳು

Sumana Upadhyaya
ಬೆಂಗಳೂರು: ಬನಶಂಕರಿ ಸಮೀಪ ಹೊರ ವರ್ತುಲ ರಸ್ತೆಯ ಸುತ್ತಮುತ್ತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಪ್ರತಿದಿನ ಟ್ರಾಫಿಕ್ ಸಮಸ್ಯೆಯನ್ನು ಎದುರಿಸಬೇಕು. ಹೊರ ರಿಂಗ್ ರಸ್ತೆಯಲ್ಲಿ  ಮೇಲ್ಸೇತುವೆ ಅಥವಾ ಸ್ಕೈವಾಕ್ ಇಲ್ಲದಿರುವುದರಿಂದ ಶಾಲಾ ಮಕ್ಕಳಿಗೆ ರಸ್ತೆ ದಾಟುವುದು ಕಷ್ಟವಾಗಿದೆ.
ಪ್ರತಿದಿನ ಈ ರಸ್ತೆ ಮೂಲಕ ನೂರಾರು ಮಕ್ಕಳು ಮತ್ತು ಪೋಷಕರು ಶಾಲೆಗೆ ಹೋಗಿ ಬರುತ್ತಾರೆ. ಈ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್, ಸಬ್ ವೇ ಅಥವಾ ಟ್ರಾಫಿಕ್ ಸಿಗ್ನಲ್ ಕೂಡ ಇಲ್ಲ. ಶಾಲಾ ಮುಖ್ಯಸ್ಥರು 2005ರಿಂದ ಇಲ್ಲಿಯವರೆಗೆ ಹಲವು ಬಾರಿ ಮೇಲ್ಸೇತುವೆ ನಿರ್ಮಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ.
ಹೊಸಕೆರೆಹಳ್ಳಿಯ ಲಿಟ್ಲ್ ಫ್ಲವರ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಲು, ಬರಲು ಬರುವ ಮಕ್ಕಳಿಗೆ ಈ ರಸ್ತೆಯನ್ನು ದಾಟುವುದು ಹರಸಾಹಸ. 2005, ಮಾರ್ಚ್ 1ರಂದು ಶಾಲಾ ಮಂಡಳಿ ಬಿಬಿಎಂಪಿಗೆ ಮೇಲ್ಸೇತುವೆ ನಿರ್ಮಿಸುವಂತೆ ಮನವಿ ಸಲ್ಲಿಸಿತ್ತು. 
ಇದಕ್ಕೆ ಬಿಬಿಎಂಪಿ ವಿಶೇಷ ಆಯುಕ್ತ ಸುಭಾಷ್ ಚಂದ್ರ, ಐಪಿಎಸ್ ಅಧಿಕಾರಿ ಕೆ.ವಿ.ಆರ್.ಠಾಕೂರ್ ನೇತೃತ್ವದಲ್ಲಿ ಸಮೀಕ್ಷೆ ನಡೆಸಲು ಸಮಿತಿ ರಚಿಸಲಾಗಿತ್ತು. ಸಮೀಕ್ಷೆ ನಂತರ ಸಮಿತಿ ಶಾಲೆ ಹತ್ತಿರ ಮೇಲ್ಸೇತುವೆ ನಿರ್ಮಿಸುವಂತೆ ವರದಿ ಸಲ್ಲಿಸಿತ್ತು. 2008 ಸೆಪ್ಟೆಂಬರ್ ನಲ್ಲಿ ಬಿಬಿಎಂಪಿ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಿತ್ತು. ಆದರೆ ಇಲ್ಲಿಯವರೆಗೆ ಕೆಲಸದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈ ಮಧ್ಯೆ, ಕಾಮಗಾರಿ ವಿಳಂಬವಾಗಿರುವುದರಿಂದ ಶಾಲಾ ಮಂಡಳಿ ಮಕ್ಕಳ ಪೋಷಕರಿಂದ ಸಹಿ ಅಭಿಯಾನ ಕೈಗೊಳ್ಳಲು ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಲೆಯ ಪ್ರಾಂಶುಪಾಲೆ ಬಿ.ಗಾಯತ್ರಿ ದೇವಿ, ಪೋಷಕರಿಂದ 5,000 ಸಹಿ ಸಂಗ್ರಹವಾದರೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಲು ಸಹಾಯವಾಗುತ್ತದೆ. ಮಕ್ಕಳು ಮತ್ತು ಪೋಷಕರು ಪ್ರತಿದಿನ ಸಮಸ್ಯೆ ಎದುರಿಸುತ್ತಿದ್ದಾರೆ. 
ರಸ್ತೆ ದಾಟುವುದು ನಿಜಕ್ಕೂ ಅಪಾಯವಾಗಿದೆ. ರಿಂಗ್ ರಸ್ತೆಯಲ್ಲಿ ವಾಹನಗಳು ವೇಗವಾಗಿ ಓಡಾಡುತ್ತವೆ. ಅಲ್ಲದೆ ಇಲ್ಲಿ ಸ್ಪೀಡ್ ಬ್ರೇಕರ್ ಅಥವಾ ಸಿಗ್ನಲ್ ಕೂಡ ಇಲ್ಲ. ರಸ್ತೆ ದಾಟಲು ಕನಿಷ್ಠ 10 ನಿಮಿಷ ಬೇಕಾಗುತ್ತದೆ ಎನ್ನುತ್ತಾರೆ 2ನೇ ತರಗತಿಯ ಬಾಲಕನ ಪೋಷಕರಾದ ದರಿನ್ಯ.
SCROLL FOR NEXT