ಬೆಂಗಳೂರು: ಕಳೆದ ಐದು ದಿನಗಳಿಂದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋಗೆ ಶನಿವಾರ ಕಡೆಯ ದಿನವಾಗಿದ್ದು, ಲೋಹದ ಹಕ್ಕಿಗಳ ಹಾರಾಟ ನೋಡಲು ಜನಸಾಗರವೇ ಹರಿದು ಬಂದಿತ್ತು.
ಏರ್ ಶೋ ಕಡೆಯದಿನವಾದ ಇಂದು ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಹೆಬ್ಬಾಳದಿಂದ ಹುಣಸಮಾರನಹಳ್ಳಿಯವರೆಗೂ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಹಲವರು ತಮ್ಮ ವಾಹನಗಳಲ್ಲಿ ಫ್ಲೈಒವರ್ ಮೇಲೆ ನಿಲ್ಲಿಸಿ ಅಲ್ಲಿಂದಲೇ ವಿಮಾನಗಳ ಹಾರಾಟವನ್ನು ಕಣ್ತುಂಬಿಕೊಂಡರು.
ಹೈದರಾಬಾದ್ ರಸ್ತೆಯಲ್ಲಿ ನಿಧಾನಗತಿಯಲ್ಲಿ ವಾಹನಗಳು ಸಾಗುತ್ತಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದರು. ಇನ್ನು ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬಂತು. ಜತೆಗೆ ಏರ್ ಶೋ ನೋಡಲು ಆಗಮಿಸುವ ಜನರ ಕಾರು ನಿಲುಗಡೆ ಬಳಿ ಕಿಲೋಮಿಟರ್ ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು.