ರಾಜ್ಯ

ಇಲಾಖೆ ಮುಖ್ಯಸ್ಥರಿಗೆ ತಲುಪದ ಲೋಕಾಯುಕ್ತ ವರದಿ: ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ವಿಳಂಬ

Shilpa D

ಬೆಂಗಳೂರು: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಲ್ಲಿಸುವ ವರದಿ ಆಯಾಯಾ ಇಲಾಖೆಯ ಮುಖ್ಯಸ್ಥರಿಗೆ ತಲುಪದ ಕಾರಣ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ತಪ್ಪಿತಸ್ಥರು, ಭ್ರಷ್ಟರು ಎಂಬ ದೂರುಗಳ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಿ ಗೌಪ್ಯವಾದ ವರದಿಯನ್ನು ಸಂಬಂದ ಪಟ್ಟ ಇಲಾಖೆಗೆ ರವಾನಿಸುತ್ತದೆ. ವರದಿಯನ್ನು ಸೀಲ್ ಮಾಡಿದ ಕವರ್ ನಲ್ಲಿಟ್ಟು ಪರ್ಸನಲ್ ಸೆಕ್ಷನ್ ನ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಅದು ತಲುಪದೇ ವಾಪಸ್ ಲೋಕಾಯುಕ್ತಕ್ಕೆ ಕಳುಹಿಸಲಾಗುತ್ತಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ, ಕಳೆದ 2 ವರ್ಷಗಳಿಂದ ಹಲವು ಪ್ರಕರಣಗಳು ಹಾಗೆಯೇ ಉಳಿದುಕೊಂಡಿವೆ. ತಪ್ಪಿತಸ್ಥರು ಯಾವ ತನಿಖೆ, ಶಿಕ್ಷೆ ಇಲ್ಲದೇ ಆರಾಮವಾಗಿ ಓಡಾಡಿಕೊಂಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,  ಕಂದಾಯ ಇಲಾಖೆ, ಗೃಹ ಇಲಾಖೆಗೆ ಸಂಬಂಧ ಪಟ್ಟ ಲೋಕಾಯುಕ್ತ ವರದಿ ಮುಖ್ಯಸ್ಥರ ಕೈಗೆ ಸೇರದ ಕಾರಣ ಅವರು ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಈ ಇಲಾಖೆಯ ಕೆಲವೊಂದು ಅಧಿಕಾರಿಗಳು ಶಿಸ್ತುಕ್ರಮದಿಂದ ತಪ್ಪಿತಸ್ಥರನ್ನು ಬಚಾವು ಮಾಡಲು ಯಾವಾಗಲೂ ಇಂಥ ಟ್ರಿಕ್ಸ್ ಗಳನ್ನು ಬಳಸುತ್ತಿರುತ್ತಾರೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಲವು ಪ್ರಕರಣಗಳಲ್ಲಿ ತನಿಖೆಯೇ ವಿಳಂಬವಾಗುತ್ತದೆ. ಎರಡು ವರ್ಷಗಳೂ ಕಳೆದರೂ ತನಿಖೆ ಸಂಪೂರ್ಣವಾಗುವುದೇ ಇಲ್ಲ, ವಿಶೇಷವಾಗಿ ಕಂದಾಯ ಇಲಾಖೆ ಅಧಿಕಾರಿಗಳಿಗೆ  ನಾವು ಸಮನ್ಸ್ ನೀಡುತ್ತೇವೆ. ವಿಳಂಬದ ಬಗ್ಗೆ ವಿವರ ಕೋರಿ ಶೋಕಾಸ್ ನೋಟೀಸ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂತಿಯಾ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಲೋಕಾಯುಕ್ತ ಅಥವಾ ಉಪಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಶಿಫಾರಸು ಮಾಡುವ ಸಿಬ್ಬಂದಿ ಅಥವಾ ಅಧಿಕಾರಿಗಳು ವಿರುದ್ಧ ತನಿಖೆ ನಡೆಸಬೇಕೆಂದು ಆಯಾಯಾ ಇಲಾಖೆಯ ಮುಖ್ಯಸ್ಥರಿಗೆ ಸುಭಾಷ್ ಚಂದ್ರ ಕುಂತಿಯಾ ಆದೇಶ ನೀಡಿದ್ದಾರೆ.

ಈ ಮೊದಲು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಅರವಿಂದ್ ಜಾಧವ್ ಅವರಿಗೆ ಲೋಕಾಯುಕ್ತ ರಿಜಿಸ್ಟ್ರಾರ್ ಸಮಸ್ಯೆಯ ಬಗ್ಗೆ ತಿಳಿಸಿದ್ದರು.  ಆದರೆ ಅವರು ಯಾವ ಕ್ರಮವನ್ನು ಕೈಗೊಂಡಿರಲಿಲ್ಲ. ಸದ್ಯ ಪ್ರಸ್ತುತ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂತಿಯಾ ಎಲ್ಲಾ ಇಲಾಖೆಗಳಿಗೆ ಫೆಬ್ರವರಿ 16 ರಂದು ಸುತ್ತೋಲೆ ಹೊರಡಿಸಿದ್ದಾರೆ.

SCROLL FOR NEXT