ರಾಜ್ಯ

ಬೆಂಗಳೂರಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ: ನಾಲ್ವರ ವಿಚಾರಣೆ

Lingaraj Badiger
ಬೆಂಗಳೂರು: ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಡಿಸೆಂಬರ್ 31ರಂದು ಮಧ್ಯರಾತ್ರಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಸಂಬಂಧ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣದಿಂದಾಗಿ ರಾಷ್ಟ್ರವ್ಯಾಪಿ ಬೆಂಗಳೂರಿನ ಮಾನ ಹರಾಜಾಗುತ್ತಿರುವಂತೆಯೇ ಇತ್ತ ಮತ್ತೊಂದು ಅಂತಹುದೇ ಘಟನೆ ಬೆಳಕಿಗೆ ಬಂದಿದೆ. 
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯೋರ್ವಳನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಸ್ತೆಯಲ್ಲೇ ಅಡ್ಡಗಟ್ಟಿ ಆಕೆಯನ್ನು ಮನಸೋ ಇಚ್ಛೆ ಎಳೆದಾಡಿ ಅಸಭ್ಯವಾಗಿ ವರ್ತಿಸಿ ಆಕೆಯನ್ನು ಚುಂಬಿಸಿ ಬಿಸಾಡಿ ಹೋಗಿದ್ದಾರೆ.  ವಿಪರ್ಯಾಸವೆಂದರೆ ಈ ಘಟನೆ ನಡೆದಿರುವುದು ಇದೇ ಜನವರಿ 1ರಂದು ಮತ್ತು ಯುವತಿಯ ಮನೆಯ ಬಳಿಯಲ್ಲೇ. ಯುವತಿ ಮನೆ ಬಳಿ ಇರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದೀಗ ದೇಶವ್ಯಾಪಿ ತೀವ್ರ  ಚರ್ಚೆಗೀಡಾಗುತ್ತಿದೆ.
ಬೆಂಗಳೂರಿನ ಕಮ್ಮನಹಳ್ಳಿಯ 5ನೇ ಮುಖ್ಯರಸ್ತೆಯಲ್ಲಿ  ಜನವರಿ 1 ರಂದು ಬೆಳಗಿನ ಜಾವ ಸುಮಾರು 2.30 ರ ವೇಳೆಗೆ ಈ ಘಟನೆ ನಡೆದಿದ್ದು, ಆಟೋದಲ್ಲಿ ಬಂದಿಳಿದ ಯುವತಿಯನ್ನು ಸ್ಕೂಟರ್‌ನಲ್ಲಿ ಬಂದ ಇಬ್ಬರು  ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಒಬ್ಟಾತ ಸ್ಕೂಟರ್‌ನಿಂದ ಇಳಿದು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಆಕೆಯನ್ನು ತಬ್ಬಿ ಮುದ್ದಾಡಿ ಚುಂಬಿಸಿದ್ದಾನೆ. ಯುವತಿಯನ್ನು ಎಳೆದೊಯ್ದು ಸ್ಕೂಟರ್‌ನಲ್ಲಿ ಕೂರಿಸಲು  ಯತ್ನಿಸಿದ್ದಾನೆ, ಪ್ರತಿರೋಧ ತೋರಿದಾಗ ಆಕೆಯನ್ನು ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ.
ಈ ಘಟನೆ ನಡೆಯುತ್ತಿದ್ದಾಗ ಅದೇ ರಸ್ತೆಯಲ್ಲಿ ಸುಮಾರು 50 ಮೀಟರ್ ದೂರದಲ್ಲಿ ನಾಲ್ಕೈದು ಜನ ನಿಂತು ಘಟನೆಯನ್ನು ನೋಡುತ್ತಿದ್ದರೇ ಹೊರತು ಯಾರೊಬ್ಬರೂ ಯುವತಿಯ ನೆರವಿಗೆ ಧಾವಿಸಿ ಬರಲಿಲ್ಲ. ಇದೀಗ ಈ ಪ್ರಕರಣ  ಮಾಧ್ಯಮಗಳ ಮುಖಾಂತರ ಬೆಳಕಿಗೆ ಬಂದಿದ್ದು, ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲು ಮಾಡಿದ್ದಾರೆ. ಅಂತೆಯೇ ಸಿಸಿಟಿವಿ ದೃಶ್ಯಾವಳಿಯಲ್ಲಿರುವ ಚಿತ್ರಗಳನ್ನು ಆಧರಿಸಿ ನಾಲ್ವರನ್ನು ಬಂಧಿಸಿದ್ದಾರೆ.
SCROLL FOR NEXT