ರಾಜ್ಯ

'ಈ ಕ್ಷಣದಿಂದ ಮಂತ್ರಿ ಮಾಲ್ ಬಂದ್ ಮಾಡಲಾಗುವುದು': ಬಿಬಿಎಂಪಿ

Lingaraj Badiger
ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್ ನ ಹಿಂಭಾಗದ ಗೋಡೆ ಕುಸಿತ ಹಿನ್ನೆಲೆಯಲ್ಲಿ ಈ ಕ್ಷಣದಿಂದಲೇ ಸಾರ್ವಜನಿಕರಿಗೆ ಮಾಲ್ ಬಂದ್ ಮಾಡಲಾಗುವುಗು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಸೋಮವಾರ ಹೇಳಿದ್ದಾರೆ.
ಇಂದು ಮಧ್ಯಾಹ್ನ ಮಾಲ್ ಹಿಂಬದಿ ಗೋಡೆ ಕುಸಿದು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ್ ಅವರು, ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ಷಣದಿಂದಲೇ ಮಾಲ್ ಆಕ್ಯುಪೆನ್ಸಿ ಪ್ರಮಾಣ ಪತ್ರ ರದ್ದು ಮಾಡಿ, ಸಾರ್ವಜನಿಕ ಪ್ರವೇಶ ಬಂದ್ ಮಾಡಲಾಗುವುದು. ನಂತರ ಕಟ್ಟಡದ ಸ್ಥಿತಿ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಅವರು, ಸಾರ್ವಜನಿಕ ಹಿತಕ್ಕಾಗಿ ಮಾಲ್ ಬಂದ್ ಮಾಡುವುದು ಉತ್ತಮ. ಇದು ಸುಮಾರು 15 ವರ್ಷದ ಹಳೆಯ ಕಟ್ಟಡವಾಗಿದ್ದು, ಗೋಡೆ ಕುಸಿತದಿಂದಾಗಿ ಅಕ್ಕ, ಪಕ್ಕದ ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಕಟ್ಟಡದ ಸುರಕ್ಷತೆ ಕುರಿತು ವರದಿ ತರಿಸಿಕೊಂಡು ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಗೋಡೆ ಕುಸಿತದ ಸುದ್ದಿಯಿಂದಾಗಿ ಮಾಲ್ ನಲ್ಲಿದ್ದ ಸಿಬ್ಬಂದಿಗಳು, ಜನರು ಆತಂಕಕ್ಕೀಡಾಗಿದ್ದು, ಕೆಲಕಾಲ ತೀವ್ರ ಆತಂಕ ಸೃಷ್ಟಿ ಮಾಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್ ನಿಂದ ಎಲ್ಲಾ ಜನರನ್ನು ತೆರವುಗೊಳಿಸಲಾಗಿದೆ ಮತ್ತು ಚಿತ್ರ ಪ್ರದರ್ಶನ ಸಹ ಸ್ಥಗಿತಗೊಳಿಸಲಾಗಿದೆ. 
ನೀರು ಸರಬರಾಜು ಪೈಪ್ ತುಂಡಾಗಿ 1ರಿಂದ 3ನೇ ಮಹಡಿಯಲ್ಲಿ ನೀರು ತುಂಬಿಕೊಂಡಿತ್ತು. ನೀರು ಸಂಗ್ರಹದಿಂದ ಹಿಂಭಾಗದ ಗೋಡೆ ಕುಸಿದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ ಮತ್ತಷ್ಟು ಗೋಡೆ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
SCROLL FOR NEXT