ರಾಜ್ಯ

ಮೈಸೂರಿನಲ್ಲಿ ಹುಲಿಮರಿ ಸಾವು: ಕಳೆದ 20 ದಿನಗಳಲ್ಲಿ 4 ಹುಲಿಗಳ ದುರ್ಮರಣ

Shilpa D

ಮೈಸೂರು: ಕಾಫಿ ಎಸ್ಟೇಟ್‌ನಲ್ಲಿ ಉರುಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಹುಲಿಮರಿ ಮೃತ ಪಟ್ಟಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ಸಮೀಪದ  ಕಾಫಿ ಎಸ್ಟೇಟ್ ನಲ್ಲಿ ಉರುಳಿಗೆ ಸಿಲುಕಿ ಈ ಹುಲಿಮರಿ ಗಂಭೀರವಾಗಿ ಗಾಯಗೊಂಡಿತ್ತು, ನಂತರ ಇದನ್ನು ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಪುನರ್ವಸತಿ  ಕೇಂದ್ರಕ್ಕೆ ಕರೆ ತರಲಾಗಿತ್ತು.

ರಕ್ಷಣೆ ಕಾರ್ಯಾಚರಣೆಯ ವೇಳೆ ಸಂಭವಿಸುವ ಅವಘಡದಿಂದ ಮೃತಪಟ್ಟ ಎರಡನೇ ಹುಲಿ ಇದಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವಲಯ ವ್ಯಾಪ್ತಿಯಲ್ಲಿ ಜ. 16ರಂದು 9 ವರ್ಷದ ಹುಲಿಯೊಂದು ಕಾರ್ಯಾಚರಣೆ ವೇಳೆ ಮೃತಪಟ್ಟಿತ್ತು.

ಪೊನ್ನಂಪೇಟೆ ಬಳಿ ಉರುಳಿಗೆ ಸಿಲಿಕಿದ ಹುಲಿಯ ಕಾಲಿನ ಭಾಗದಲ್ಲಿ ದೊಡ್ಡ ಪ್ರಮಾಣದ ಗಾಯವಾಗಿತ್ತು. ಉರುಳಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮ ಇತರ ಕಾಲುಗಳಿಗೂ ಗಾಯಗಳಾಗಿದ್ದವು. ಪುನರ್ವಸತಿ ಕೇಂದ್ರಕ್ಕೆ ತಂದ ಬಳಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗಾಯದ ಸೋಂಕು ದೇಹಕ್ಕೆ ವ್ಯಾಪಿಸಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ’ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ತಿಳಿಸಿದ್ದಾರೆ.

ಹಂದಿ ಹಿಡಿಯಲು ಹಾಕಿದ ಉರುಳಿಗೆ ಜ. 17ರ ರಾತ್ರಿ ಹುಲಿಯ ಕಾಲುಗಳು ಸಿಲುಕಿದ್ದವು. ನಾಗರಹೊಳೆ ಉದ್ಯಾನದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅರಿವಳಿಕೆ ಮದ್ದು ನೀಡಿ ಹುಲಿ ರಕ್ಷಣೆ ಮಾಡಿದ್ದರು. ನಂತರ ಮೈಸೂರಿನ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

ಜನವರಿ 4 ರಂದು ನಾಗರಹೊಳೆ ಅರಣ್ಯದ ಡಿಬಿ ಕುಪ್ಪೆ ಗ್ರಾಮದಲ್ಲಿ ಹೆಣ್ಣು ಹುಲಿ ಸಾವನ್ನಪ್ಪಿತ್ತು. ಜನವರಿ 13 ರಂದು ಗಾಯಗೊಂಡಿದ್ದ ಹುಲಿಯನ್ನು ಬಂಡಿಪುರದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆ ಹುಲಿ ಸಾವನ್ನಪ್ಪಿತ್ತು.  ಜನವರಿ 16 ರಂದು ಅರಿವಳಿಕೆ ಮದ್ದಿನ ಓವರ್ ಡೋಸ್ ನಿಂದಾಗಿ ಮೃತಪಟ್ಟಿತ್ತು.

SCROLL FOR NEXT