ರಾಜ್ಯ

ಮಹಿಳೆ ಅಪಹರಣ ಪ್ರಕರಣ: 12 ಗಂಟೆಗಳಲ್ಲೇ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು

Shilpa D

ಬೆಂಗಳೂರು: ಮಗನನ್ನು ಹೊರಗೆ ಕಳುಹಿಸಿ 71 ವರ್ಷದ ಮಹಿಳೆಯನ್ನು ಕಿಡ್ನಾಪ್ ಪ್ರಕರಣವನ್ನು ಕೇವಲ 12 ಗಂಟೆಗಳಲ್ಲೇ ಬೇಧಿಸಿರುವ ಯಶವಂತಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಹಿಳೆಯನ್ನು ಸುರಕ್ಷಿತವಾಗಿ ಮನೆಗೆ ಸೇರಿಸಿದ್ದಾರೆ.

ಮತ್ಯಾಲ ನಗರದ ನಿವಾಸಿ ವಿಮಲಾ ಅವರನ್ನು ಆರೋಪಿಗಳು ಅಪಹರಿಸಿದ್ದರು. ಇತ್ತೀಚೆಗೆ ವಿಮಲಾ ಅವರ ಪುತ್ರ ಶಿವಕುಮಾರ್ ಹೊಸ ಬೈಕ್ ಖರೀದಿಸಿದ್ದರು. ಬೈಕ್ ಖರೀದಿಸಿದ್ದಕ್ಕಾಗಿ ಗಿಫ್ಟ್ ಬಂದಿದೆ ಎಂದು ಹೇಳಿ. ಬಹುಮಾನ ಸಂಗ್ರಹಿಸಿಕೊಂಡು ಹೋಗುವಂತೆ ಶಿವಕುಮಾರ್‌ಗೆ ಸುಳ್ಳು ಹೇಳಿ ಮನೆಯಿಂದ ಹೊರ ಕರೆಸಿಕೊಂಡ ದುಷ್ಕರ್ಮಿಗಳು, ನಂತರ ಪೊಲೀಸರ ಸೋಗಿನಲ್ಲಿ ಅವರ ಮನೆಗೆ ನುಗ್ಗಿ ತಾಯಿಯನ್ನು ಅಪಹರಿಸಿದ್ದರು. ಮುತ್ಯಾಲನಗರದ ಕೃಷ್ಣ (33), ಶ್ರೀನಿವಾಸ್ (35) ಹಾಗೂ ಹೊಸಕೋಟೆಯ ವಿಜಯ್‌ಕುಮಾರ್ ಅಲಿಯಾಸ್ ವಿಜಿ (30) ಎಂಬುವರನ್ನು ಬಂಧಿಸಲಾಗಿದೆ.

ಶಿವಕುಮಾರ್ ಬುಲೆಟ್ ಬೈಕ್ ಖರೀದಿಸಿದ್ದರು. ಈ ವಿಚಾರ ತಿಳಿದು ಮಂಗಳವಾರ ಮಧ್ಯಾಹ್ನ 11.30ರ ಸುಮಾರಿಗೆ ಅವರಿಗೆ ಕರೆ ಮಾಡಿದ್ದ ಕೃಷ್ಣ, ಬುಲೆಟ್ ಖರೀದಿಸಿರುವುದಕ್ಕೆ ಶೋರೂಂ ಕಡೆಯಿಂದ ನಿಮಗೆ ವಿಶೇಷ ಬಹುಮಾನ ಬಂದಿದೆ. ಅದನ್ನು ಆರ್‌ಎಂಸಿ ಯಾರ್ಡ್‌ನಲ್ಲಿರುವ ಬ್ಲೂಡಾರ್ಟ್ ಕೊರಿಯರ್ ಮಳಿಗೆಗೆ ಕಳುಹಿಸಿದ್ದೇವೆ. ಹೋಗಿ ಸಂಗ್ರಹಿಸಿಕೊಳ್ಳಿ ಎಂದಿದ್ದಾನೆ. ಈ ಮಾತನ್ನು ನಂಬಿದ ಶಿವಕುಮಾರ್, ವಿಚಾರಿಸಲು ಆ ಕೊರಿಯರ್ ಅಂಗಡಿಗೆ ಹೋಗಿದ್ದಾರೆ, ಇದೇ ಸಮಯಕ್ಕಾಗಿ ಕಾಯುತ್ತಿದ್ದ ಕೃಷ್ಣ ಹಾಗೂ ವಿಜಯ್‌ಕುಮಾರ್, ಕೂಡಲೇ ಶ್ರೀನಿವಾಸ್‌ಗೆ ಕರೆ ಮಾಡಿ ಕಾರು ತೆಗೆದುಕೊಂಡು ವಿಮಲಾ ಅವರ ಮನೆ ಹತ್ತಿರ ಬರುವಂತೆ ಹೇಳಿದ್ದಾರೆ. ಆತ ಸಂಬಂಧಿಯೊಬ್ಬರ ಕಾರು ತೆಗೆದುಕೊಂಡು ಸ್ವಲ್ಪ ಸಮಯದಲ್ಲೇ ಅಲ್ಲಿಗೆ ತೆರಳಿದ್ದಾನೆ.

ನಂತರ ವಿಮಲಾ ಅವರ ಮನೆಗೆ ತೆರಳಿದ ಆರೋಪಿಗಳು ನಿಮ್ಮ ಸೊಸೆ ತವರು ಮನೆಗೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ನಿಮ್ಮನ್ನು ವಿಚಾರಣೆ ನಡೆಸಬೇಕಿದೆ. ಠಾಣೆಗೆ ಬನ್ನಿ ಎಂದು ವಿಮಲಾ ಅವರನ್ನು ಕರೆದಿದ್ದಾರೆ. ಅದನ್ನು ನಂಬಿದ ಅವರು, ಆರೋಪಿಗಳ ಜತೆ ಕಾರಿನಲ್ಲಿ ಹೊರಟು ಹೋಗಿದ್ದರು. ಆರೋಪಿಗಳು ವಿ.ನಾಗೇನಹಳ್ಳಿಯಲ್ಲಿ ಕೆಲ ದಿನಗಳ ಹಿಂದೆಯೇ ಮನೆಯೊಂದನ್ನು ಬಾಡಿಗೆ ಪಡೆದಿದ್ದರು. ವಿಮಲಾ ಅವರನ್ನು ಅದೇ ಮನೆಗೆ ಕರೆದೊಯ್ದಿದ್ದರು.
 
ಇತ್ತ ಬಹುಮಾನದ ಬಗ್ಗೆ ವಿಚಾರಿಸಲು ಹೋಗಿದ್ದ ಶಿವಕುಮಾರ್‌ಗೆ,  ಅಂಥ ಯಾವುದೇ ಪಾರ್ಸೆಲ್ ಬಂದಿಲ್ಲ ಎಂಬುದು ಗೊತ್ತಾಯಿತು. ಮಧ್ಯಾಹ್ನ 2 ಗಂಟೆಗೆ ಅವರು ಹಿಂದಿರುಗಿದಾಗ ಮನೆಗೆ ಬೀಗ ಹಾಕಿತ್ತು. ತಾಯಿ ಆಸ್ಪತ್ರೆಗೆ ಹೋಗಿರಬಹುದೆಂದು ಭಾವಿಸಿ ಸ್ವಲ್ಪ ಸಮಯ ಅವರು ಅಲ್ಲೇ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ.

ನಂತರ ಸುಮಾರು 2.30ಕ್ಕೆ ಶಿವಕುಮಾರ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾಯಿಯನ್ನು ಅಪಹರಿಸಿರುವುದಾಗಿ ಹಾಗೂ ರು 1.5 ಕೋಟಿ ಕೊಡದಿದ್ದರೆ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.  ಹೀಗಾಗಿ ಶಿವಕುಮಾರ್ ಕೊನೆಗೆ ಅವರು ಠಾಣೆ ಮೆಟ್ಟಿಲೇರಿದ್ದರು. ಬೆದರಿಕೆ ಕರೆ ಬಂದಿದ್ದ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರಟ ಪೊಲೀಸರು, ಮೂರು ತಂಡಗಳನ್ನು ರಚಿಸಿದ್ದರು. ಆರೋಪಿಗಳು ಕರೆ ಮಾಡಿದ್ದ ಒಂದು ಸಂಖ್ಯೆ ಹೆಬ್ಬಾಳ ಸುತ್ತಮುತ್ತಲ ಟವರ್‌ನಿಂದ ಸಂಪರ್ಕ ಪಡೆಯುತ್ತಿತ್ತು. ಸುಳಿವು ಆಧರಿಸಿ ಬುಧವಾರ ಬೆಳಗಿನ ಜಾವ 4 ಗಂಟೆಗೆ ಆರೋಪಿಗಳನ್ನು ಪತ್ತೆ ಮಾಡಿ ವಿಮಲಾ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಕೃಷ್ಣ ಅತ್ಯಾಚಾರ ಆರೋಪದ ಜೈಲು ಸೇರಿದ್ದ, ಇನ್ನೊಬ್ಬ ಆರೋಪಿ ವಿಜಯ್‌ಕುಮಾರ್, ನಂದಗುಡಿ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಕೊಂದು ಜೈಲಿಗೆ ಬಂದಿದ್ದ.  ಕಾರಾಗೃಹದಲ್ಲಿ ಒಂದೇ ಬ್ಯಾರಕ್‌ನಲ್ಲಿದ್ದ ಇವರಿಬ್ಬರೂ, ಸುಲಭವಾಗಿ ಹಣ ಗಳಿಸಲು ದೊಡ್ಡಮಟ್ಟದ ಕೃತ್ಯ ಎಸಗಬೇಕೆಂದು ಸಂಚು ರೂಪಿಸಿದ್ದರು. ಎರಡು ತಿಂಗಳ ಹಿಂದೆ ಜಾಮೀನಿನ ಮೇಲೆ ಇಬ್ಬರೂ ಬಿಡುಗಡೆಯಾಗಿದ್ದರು.
 
ನಮ್ಮ ಮನೆ ಪಕ್ಕದಲ್ಲಿ ವಿಮಲಾ ಎಂಬ ಹಿರಿಯ ಮಹಿಳೆ ಇದ್ದಾರೆ. ಅವರ ಮಗಳು ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಇಬ್ಬರು ಗಂಡು ಮಕ್ಕಳು ಸಹ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಮೊದಲ ಮಗನಿಗೆ ಮದುವೆ ಆಗಿದ್ದು, ಪತ್ನಿ ಜತೆ ನಗರದಲ್ಲೇ ಬೇರೆ ಕಡೆ  ನೆಲೆಸಿದ್ದಾರೆ. ಈ ಮನೆಯಲ್ಲಿ ವಿಮಲಾ ಹಾಗೂ ಅವರ ಕಿರಿಯ ಮಗ ಶಿವಕುಮಾರ್ ಮಾತ್ರ ಇರುತ್ತಾರೆ. ವಿಮಲಾ ಅವರನ್ನು ಅಪಹರಿಸಿದರೆ ಕೈತುಂಬ ಹಣ ಸಿಗುತ್ತದೆ’ ಎಂದು ಕೃಷ್ಣ , ವಿಜಯ್‌ಕುಮಾರ್ ಹಾಗೂ ಆತನ ಸ್ನೇಹಿತ ಶ್ರೀನಿವಾಸ್‌ಗೆ ಹೇಳಿದ್ದ. ಅದರಂತೆ ಪ್ಲಾನ್ ಮಾಡಿ ವಿಮಾಲಾ ಅವರನ್ನು ಅಪಹರಿಸಿ ಮತ್ತೆ ಜೈಲಿನ ಕಂಬಿ ಎಣಿಸುತ್ತಿದ್ದಾರೆ.

12 ತಾಸಿನಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಸಿಬ್ಬಂದಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಒಂದು ಕಾರು ಹಾಗೂ ಬೈಕನ್ನು ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

SCROLL FOR NEXT