ಮೈಸೂರು: ಕೆಲವು ವಲಸೆ ಹಕ್ಕಿಗಳು ಮತ್ತು ಹಕ್ಕಿ ಜ್ವರದ ಭೀತಿಯಿಂದ ತಿಂಗಳ ಹಿಂದೆ ಮುಚ್ಚಲ್ಪಟ್ಟಿದ್ದ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ಇನ್ನು ಒಂದೆರಡು ದಿನಗಳಲ್ಲಿ ಮತ್ತೆ ತೆರೆದುಕೊಳ್ಳಲಿದೆ.
ಭೋಪಾಲ್ ನ ಅತಿ ಭದ್ರತೆ ಮತ್ತು ಪ್ರಾಣಿ ರೋಗ ರಾಷ್ಟ್ರೀಯ ಸಂಸ್ಥೆಗೆ ಮೃಗಾಲಯದ ಒಳಗಿನ ಮಣ್ಣು, ನೀರು ಮತ್ತು ಚರಟದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಅದು ಋಣಾತ್ಮಕ ಫಲಿತಾಂಶವನ್ನು ನೀಡಿದೆ. ಹಾಗಾಗಿ ಮೃಗಾಲಯವನ್ನು ಮತ್ತೆ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗುತ್ತದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಮೈಸೂರು ಮೃಗಾಲಯದ ಕಾರ್ಯಕಾರಿ ನಿರ್ದೇಶಕ ಕೆ. ಕಮಲಾ, ಭೋಪಾಲ್ ಸಂಸ್ಥೆ ನೀಡಿರುವ ವರದಿಗಳ ಫಲಿತಾಂಶ ಬಗ್ಗೆ ವಿಶ್ಲೇಷಣೆ ಮಾಡಲು ಬೆಂಗಳೂರಿನಲ್ಲಿ ಇಂದು 11 ಗಂಟೆಗೆ ಸಭೆ ಕರೆಯಲಾಗಿದೆ. ಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಬಹುಶಃ ಇನ್ನು ಒಂದೆರಡು ದಿನಗಳಲ್ಲಿ ಮೃಗಾಲಯ ತೆರೆಯಬಹುದು ಎಂದು ಹೇಳಿದ್ದಾರೆ.