ರಾಜ್ಯ

ಸ್ಪೀಕರ್ ಮುಂದೆ ರವಿ ಬೆಳಗೆರೆ, ಅನಿಲ್ ರಾಜ್ ಹಾಜರು: ಶಿಕ್ಷೆ ಮರುಪರಿಶೀಲನೆಗೆ ಮನವಿ

Shilpa D
ಬೆಂಗಳೂರು: ಕನ್ನಡ ವಾರ ಪತ್ರಿಕೆಯ ಸಂಪಾದಕರುಗಳಾದ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಸ್ಪೀಕರ್ ಕೋಳಿವಾಡ ಎದುರು ಸೋಮವಾರ ಹಾಜರಾದರು.  ತಮಗೆ ನೀಡಿರುವ 1ವರ್ಷ ಜೈಲು ಮತ್ತು 10 ಸಾವಿರ ರು ದಂಡ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು  ವಾಯ್ಸ್ ಆಫ್ ಯಲಹಂಕ ಪತ್ರಿಕೆ ಸಂಪಾದಕ ಅನಿಲ್ ರಾಜ್‌ ಅವರು ಸೋಮವಾರ ಮಧ್ಯಾಹ್ನ 3 ಗಂಟೆಗೊಳಗೆ ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಅದರಂತೆ ಸಭಾಧ್ಯಕ್ಷರ ಮುಂದೆ ಹಾಜರಾಗಿ ತಮಗೆ ವಿಧಿಸಿರುವ ಒಂದು ವರ್ಷದ ಜೈಲು ಶಿಕ್ಷೆಯನ್ನು ಪುನರ್‌ ಪರಿಶೀಲಿಸುವಂತೆ ಮನವಿ ಮಾಡಿದರು.
ವಿಧಾನಸಭೆ ಹಕ್ಕುಬಾಧ್ಯತಾ ಸಮಿತಿಯು ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಶಿಫಾರಸು ಮಾಡಿತ್ತು. ಇದನ್ನು ಸದನ ಸರ್ವಾನುಮತದಿಂದ ಅಂಗೀಕರಿಸಿತ್ತು. ಅವರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದರು.
ಸದನದ ಒಳಗೆ ಅಥವಾ ಹೊರಗೆ ಹಕ್ಕು ಚ್ಯುತಿಯಾದರೆ ಮಾತ್ರ ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಇಬ್ಬರೂ ನದನದ ಒಳಗೆ ಇರಲಿಲ್ಲ ಹಾಗೂ ಸದನ ಹೊರಗೆ ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿಯೂ ಇಲ್ಲ. ಹೀಗಿದ್ದರೂ ತಮ್ಮ ವ್ಯಾಪ್ತಿಯನ್ನು ಮೀರಿ ಶಿಕ್ಷೆಗೆ ಗುರಿಪಡಿಸಿದ್ದೀರಿ. ಆದ್ದರಿಂದ, ತಮ್ಮ ಶಿಕ್ಷೆ ಜಾರಿ ಆದೇಶವನ್ನು ಪುನರ್‌ ಪರಿಶೀಲಿಸಬೇಕು ಎಂದು ರವಿ ಬೆಳಗೆರೆ ಮತ್ತು ಅನಿಲ್ ರಾಜ್‌ ವಕೀಲ ಶಂಕರಪ್ಪ ಅವರು ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರಿಗೆ ಪುನರ್‌ ಪರಿಶೀಲನಾ ಮನವಿ ಸಲ್ಲಿಸಿದರು.
ಕಕ್ಷಿದಾರರ ವಾದ ಆಲಿಸಿದ ಕೆ.ಬಿ. ಕೋಳಿವಾಡ ಅವರು ಈ ಕುರಿತು ಪರಿಶೀಲಿಸುವುದಾಗಿ ಹೇಳಿದರು. ಹಕ್ಕುಬಾಧ್ಯತಾ ಸಮಿತಿ ಶಿಫಾರಸು ಮಾಡಿರುವ ಶಿಕ್ಷೆಯನ್ನು ಜಾರಿಗೊಳಿಸುವ ನಿರ್ಣಯ ರದ್ದುಪಡಿಸಲು ನಿರ್ದೇಶಿಸಬೇಕು’ ಎಂದು ಕೋರಿ ರವಿ ಬೆಳಗೆರೆ ಮತ್ತು ಅನಿಲ್‌ ರಾಜ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಜಾ ಮಾಡಿತ್ತು.
ಜುಲೈ 17 ರಂದು ವಿಧಾನಸಭೆ ಅಧಿವೇಶನ ಅಂತ್ಯಗೊಳ್ಳಲಿದ್ದು, ಪತ್ರಕರ್ತರಿಗೆ ನೀಡಿರುವ ಶಿಕ್ಷೆಯ ನಿರ್ಣಯ ವಾಪಸ್ ಪಡೆಯಲು ಅಥವಾ ಮರು ಪರಿಶೀಲಿಸಲು ಒಂದು ದಿನದ ವಿಶೇಷ ಅಧಿವೇಶನ ಕರೆದು ಚರ್ಚಿಸುವ ಸಾಧ್ಯತೆಯಿದೆ. 
SCROLL FOR NEXT