ಬೆಂಗಳೂರು: ಎಸ್ ಸಿ ಎಸ್ ಟಿ ಹಾಗೂ ಬಡ ವರ್ಗದ ಬಾಣಂತಿಯರಿಗೆ ನೀಡುತ್ತಿದ್ದ ಮಡಿಲು ಕಿಟ್ ಗೆ ರಾಜ್ಯ ಸರ್ಕಾರ ಸದ್ದಿಲ್ಲದೇ ಬ್ರೇಕ್ ಹಾಕಿದೆ.
ಅನುದಾನದ ಕೊರೆತ ಹಾಗೂ ಗುಣಮಟ್ಟದ ವಸ್ತುಗಳ ಅಲಭ್ಯತೆಯಿಂದಾಗಿ ಮಡಿಲು ಕಿಟ್ ವಿತರಣೆ ಯೋಜನೆಯನ್ನು ನಿಲ್ಲಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೆರಿಗೆ ನಂತರ ಬಾಣಂತಿಯರಿಗೆ ಮಡಿಲು ಕಿಟ್ ವಿತರಿಸಲಾಗುತ್ತಿತ್ತು, ಅದರಲ್ಲಿ ತಾಯಿ ಮತ್ತು ಮಗುವಿಗೆ ಅವಶ್ಯಕತೆಯಿರುವ 19 ವಸ್ತುಗಳನ್ನು ನೀಡಲಾಗುತ್ತಿತ್ತು. ಕಾಟನ್ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್, ಎಣ್ಣೆ ಮತ್ತು ಸೋಪು ಹಾಗೂ ಬೆಲ್ಟ್ ಹಾಗೂ ಬೆಡ್ ಸ್ಪ್ರೆಡ್ ಗಳನ್ನು ನೀಡಲಾಗುತ್ತಿತ್ತು.
ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಆರೋದ್ಯ ಮಿಷನ್ ನ ಸಹಯೋಗದಲ್ಲಿ 2007 ರಲ್ಲಿ ಮಡಿಲು ಕಿಟ್ ವಿತರಣೆ ಯೋಜನೆ ಆರಂಭಿಸಲಾಯಿತು. ಆದರೆ ಈ ವರ್ಷ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಜ್ಯ ಸರ್ಕಾರ ಯೋಜನೆಗೆ ಹಣ ನೀಡಲು ಮುಂದಾಗಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಆದರೆ ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿದೆ ಜೊತೆಗ ಗುಣಮಟ್ಟದ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ.
ಮಡಿಲು ಕಿಟ್ ವಿತರಣೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ಹೇಳಿದೆ ಎಂದು ಅವರು ತಿಳಿಸಿದ್ದಾರೆ.
ಹೆಣ್ಣು ಶಿಶು ಜನಿಸಿದರೇ 6 ಸಾವಿರ ರು ಡೆಪಾಸಿಟ್ ಮಾಡುವ ಹೊಸ ಯೋಜನೆ ಹಾಗೂ ನವಜಾತ ಶಿಶುವಿಗೆ 1 ಸಾವಿರ ರು. ಡೆಪಾಸಿಟ್ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರಣ ಮಡಿಲು ಕಿಟ್ ಗೆ ಹಣ ನೀಡಲು ರಾಷ್ಚ್ರೀಯ ಆರೋಗ್ಯ ಮಿಷನ್ ನಿರಾಕರಿಸಿದೆ ಎಂದು ಹೇಳಿದ್ದಾರೆ.
ಮಡಿಲು ಕಿಟ್ ಯೋಜನೆ ಬಗ್ಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಶ್ಲಾಘನೆ ವ್ಯಕ್ತ ಪಡಿಸಿತ್ತು, ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ನೀಡಿದ್ದರು, ಆದರೆ ಅನುದಾನದ ಕೊರತೆ ಮಡಿಲು ಕಿಟ್ ವಿತರಣೆಗೆ ಸಮಸ್ಯೆಯಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics