ಬೆಂಗಳೂರು: ಚೆಮ್ಮನೂರ್ ಜ್ಯುವೆಲ್ಲರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬೆಂಗಳೂರಿನಿಂದ ಕೊಯಂಬತ್ತೂರಿಗೆ ಚಿನ್ನದ ಬಿಸ್ಕತ್ ಗಳನ್ನು ಸಾಗಿಸುತ್ತಿರುವ ವೇಳೆ ಪತ್ನಿಯೇ ಆತನಿಂದ ಚಿನ್ನ ಕದ್ದಿದ್ದ ಘಟನೆ 5 ತಿಂಗಳ ನಂತರ ಬೆಳಕಿಗೆ ಬಂದಿದೆ.
ಎಸ್.ಜೆ.ಪಾರ್ಕ್ ಬಳಿಯ ಚೆಮ್ಮನೂರು ಜ್ಯುವೆಲರ್ಸ್‌ನ ಕೆಲಸಗಾರ ಮುನಿಯಪ್ಪನ್ ಬಳಿ ಇದ್ದ ಚಿನ್ನದ ಬಿಸ್ಕತ್‌ಗಳನ್ನು ಕದ್ದಿದ್ದ ಆರೋಪದಡಿ ಅವರ ಪತ್ನಿ ನಾಗಲಕ್ಷ್ಮಿ ಅವರನ್ನು ಹಲಸೂರು ಗೇಟ್ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹೊಸೂರಿನ ಮುನಿಯಪ್ಪನ್ ಕೆಲ ವರ್ಷಗಳ ಹಿಂದೆ ಚೆಮ್ಮನೂರು ಜ್ಯುವೆಲರ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಚಿನ್ನದ ಬಿಸ್ಕತ್ ಸರಬರಾಜು ಮಾಡುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು. ಫೆಬ್ರವರಿ 20ರಂದು ಅಂಗಡಿಯ ಮಾಲೀಕರು 1 ಕೆ.ಜಿಯ ನಾಲ್ಕು ಚಿನ್ನದ ಬಿಸ್ಕತ್‌ಗಳನ್ನು ತಮಿಳುನಾಡಿನ ಕೊಯಮತ್ತೂರಿನ ಶಾಖೆಗೆ ತಲುಪಿಸುವಂತೆ ಕೊಟ್ಟಿದ್ದರು. ಚಿನ್ನದ ಬಿಸ್ಕತ್ ಇದ್ದ ಬ್ಯಾಗ್ ಸಮೇತ ಮುನಿಯಪ್ಪನ್, ಪತ್ನಿ ಜತೆ ಬಸ್ ಹತ್ತಿದ್ದರು.
ಸೇಲಂನಲ್ಲಿ ದಂಪತಿ ಬಸ್‌ನಲ್ಲೇ ಊಟ ಮಾಡಿದ್ದರು. ಬಳಿಕ ಪತಿ ನಿದ್ರೆಗೆ ಜಾರಿದ್ದರು. ಅದೇ ಸಮಯದಲ್ಲಿ ಪತ್ನಿಯು ಬ್ಯಾಗ್‌ನಲ್ಲಿದ್ದ ಬಿಸ್ಕತ್‌ಗಳನ್ನು ಕದ್ದು ಬಚ್ಚಿಟ್ಟುಕೊಂಡಿದ್ದಳು. ನಿದ್ದೆಯಿಂದ ಎದ್ದ ಮುನಿಯಪ್ಪನ್ ಚಿನ್ನದ ಬ್ಯಾಗ್ ಗಾಗಿ ಹುಡುಕಾಡಿದರು. ಬಸ್ ನಲ್ಲಿ ಎಲ್ಲ ಪ್ರಯಾಣಿಕರ ಬ್ಯಾಗ್ ಅನ್ನು ಹುಡುಕಾಡಿದರೂ ಸಿಕ್ಕಲಿಲ್ಲ, ಆದರೆ ಈ ವೇಳೆ ನಾಗಲಕ್ಷ್ಮಿ ಬಳಿಯಿದ್ದ ಬ್ಯಾಗ್ ಅನ್ನು ಪರಿಶೀಲಿಸಿರಲಿಲ್ಲ.
ನಂತರ ತಮಿಳುನಾಡಿನಲ್ಲಿ ದಂಪತಿ ಬಸ್ ಇಳಿದಿದ್ದಾರೆ. ನಾನು ಬೆಂಗಳೂರಿಗೆ ವಾಪಸ್ ಹೋಗುತ್ತೇನೆ, ನೀವು ತಮಿಳುನಾಡು ಪೊಲೀಸರಿಗೆ ದೂರು ನೀಡಿ ಎಂದು ನಾಗಲಕ್ಷ್ಮಿ ಪತಿಗೆ ತಿಳಿಸಿದ್ದಾಳೆ. ಆದರೆ ಬೆಂಗಳೂರಿನಲ್ಲೇ ದೂರು ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಬೆಂಗಳೂರಿಗೆ ವಾಪಸ್ ಬಂದ ಮುನಿಯಪ್ಪನ್ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಮುನಿಯಪ್ಪನ್ ನನ್ನು ಪೊಲೀಸರು ವಿಚಾರಿಸಿದಾಗ ಆತನಿಂದ ಯಾವುದೇ ಮಾಹಿತಿ ಸಿಗಲಿಲ್ಲ, ಈ ನಡುವೆ ನಾಗಲಕ್ಷ್ಮಿಯನ್ನು ವಿಚಾರಣೆಗೆ ಕರೆದಾಗ ಆಕೆ ಠಾಣೆಗೆ ಬರಲು ನಿರಾಕರಿಸಿದ್ದಾಳೆ. ಪೊಲೀಸರೇ ಆಕೆಯ ಮನೆಗೆ ತೆರಳಿ ವಿಚಾರಣೆ ನಡೆಸುವಾಗ ದೊಡ್ಡ ಡ್ರಾಮಾ ಮಾಡಿ ಪೊಲೀಸರನ್ನು ಯಾಮಾರಿಸಿದ್ದಳು.
ಮೂರು ತಿಂಗಳಿಂದ ಆಕೆಯ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ನಾಗಲಕ್ಷ್ಮಿ ಚಿನ್ನದ ಬಿಸ್ಕತ್ ಗಳನ್ನು ಅಡವಿಡಲು ಅಥವಾ ಮಾರಲು ಹೋದಾಗ ಯಾವೊಬ್ಬ ಗಿರವಿ ಅಂಗಡಿಯಾತ ಮುಂದೆ ಬರಲಿಲ್ಲ, ನಂತರ ಅವುಗಳನ್ನು ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಮಾರಾಟ ಮಾಡಿದ್ದಳು. ಆಕೆ ಅಡವಿಟ್ಟಿದ್ದ ಎಲ್ಲಾ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.