ಡಿ.ವಿ.ಸದಾನಂದ ಗೌಡ ಮತ್ತು ಕೆ.ಜೆ.ಜಾರ್ಜ್ ಕಾರ್ಯಕ್ರಮವೊಂದರಲ್ಲಿ
ಬೆಂಗಳೂರು: ನಮ್ಮ ಮೆಟ್ರೊ ನಿಲ್ದಾಣಗಳ ನಾಮ ಫಲಕಗಳಲ್ಲಿ ಬಳಸುವ ಭಾಷೆಗಳ ಅಗತ್ಯತೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಪಾಲಿಸಿರುವ ಮೂರು ಭಾಷೆಗಳ ನೀತಿಯನ್ನು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಬಲವಾಗಿ ಸಮರ್ಥಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸದಾನಂದ ಗೌಡ, ಮಾಧ್ಯಮದವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಕೇಂದ್ರದ ಸಚಿವನಾಗಿ ಮೂರು ಭಾಷಾ ನೀತಿಯನ್ನು ಪಾಲಿಸಬೇಕೆಂದು ನಾನು ಹೇಳುತ್ತೇನೆ. ಪ್ರಾಮುಖ್ಯತೆ ಕನ್ನಡ ಭಾಷೆಗೆ ನೀಡಬೇಕು. ದೇಶದ ಬಹುತೇಕ ಜನರು ಹಿಂದಿ ಭಾಷೆ ಬಳಸುತ್ತಾರೆ. ಬೆಂಗಳೂರು ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಾಗಿಲ್ಲ.
ಒಂದು ನಗರ ವಿಶ್ವದ ಎಲ್ಲಾ ಭಾಗಗಳಿಗೆ ತಲುಪಿದೆ ಎಂದಾದರೆ ಅದು ಬೆಂಗಳೂರು ನಗರ ಮಾತ್ರ. ಇಲ್ಲಿ ಏನು ಬರೆದಿದೆ ಎಂದು ವಿದೇಶಿಯರಿಗೆ ಮತ್ತು ಬೇರೆ ರಾಜ್ಯದವರಿಗೆ ಗೊತ್ತಾಗಲು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದಿರಬೇಕಾಗುತ್ತದೆ. ಹಾಗೆಯೇ ಕನ್ನಡಿಗರಿಗೆ ಕೂಡ ನಾಮ ಫಲಕದಲ್ಲಿ ಏನು ಬರೆದಿದೆ ಎಂದು ಗೊತ್ತಾಗಬೇಕು ಎಂದು ಹೇಳಿದರು.
ಆದರೆ ಕರ್ನಾಟಕ ಸರ್ಕಾರ ನಾಮ ಫಲಕಗಳಲ್ಲಿ ಹಿಂದಿ ಭಾಷೆಯನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಮುಖ್ಯಮಂತ್ರಿಯವರ ನಿಲುವಿಗೆ ನಾನು ಬದ್ಧನಾಗಿದ್ದೇನೆ. ನಮ್ಮ ಮೆಟ್ರೊ ಕೇಂದ್ರ ಸರ್ಕಾರದ ಯೋಜನೆಯಲ್ಲ. ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಭಾಷೆಯ ಹೇರಿಕೆಯನ್ನು ರಾಜ್ಯ ಸರ್ಕಾರ ಪ್ರತಿಭಟಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.
ಬೆಂಗಳೂರು ಕೇಂದ್ರ ವಲಯದ ಸಂಸದ ಪಿ.ಸಿ.ಮೋಹನ್ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಭಾಷೆಯ ಬಳಕೆ ವಿಚಾರದಲ್ಲಿ ತನ್ನ ಅಭಿಪ್ರಾಯವನ್ನು ತಿಳಿಸಬಹುದು. ರಾಜ್ಯ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ ಎಂದರು.
'ಹಿಂದಿ ಬೇಡ' ಅಭಿಯಾನ: ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಭಾಷೆ ಬಳಕೆ ವಿಚಾರ ಕಳೆದ ಭಾನುವಾರ ಗಮನ ಸೆಳೆಯಿತು. ಚಿಕ್ಕಪೇಟೆ ಮತ್ತು ಕೆಂಪೇಗೌಡ ಮೆಟ್ರೊ ನಿಲ್ದಾಣಗಳಲ್ಲಿ ನಾಮ ಫಲಕಗಳಲ್ಲಿ ಹಿಂದಿ ಭಾಷೆಯಲ್ಲಿದ್ದ ಹೆಸರುಗಳನ್ನು ತೆಗೆಯಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಹಿಂದಿ ಭಾಷೆ ಬಳಕೆಯನ್ನು ವಿರೋಧಿಸಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಎರಡು ನೊಟೀಸ್ ಕಳುಹಿಸಿದೆ.
#ನಮ್ಮ ಮೆಟ್ರೊ ಹಿಂದಿ ಬೇಡ ಎಂಬ ಆನ್ ಲೈನ್ ಅಭಿಯಾನವನ್ನು ಕನ್ನಡ ಸಂಘಟನೆ ಬನವಾಸಿ ಬಳಗ ಆರಂಭಿಸಿದೆ. ರಾಷ್ಟ್ರಮಟ್ಟದಲ್ಲಿ ಇದು ಗಮನ ಸೆಳೆದಿದೆ. ಮಹಾರಾಷ್ಟ್ರದಲ್ಲಿ ಕೂಡ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಭಾಷೆ ಬಳಸದಂತೆ ಈ ಹಿಂದೆ ಪ್ರತಭಟನೆ ನಡೆದಿತ್ತು.