ಬೆಂಗಳೂರು: ತಾವು ಅನುಮೋದಿಸಿದ ಆದೇಶವನ್ನು ನಿಗದಿತ ದಿನಾಂಕದಿಂದ ಹಿಂದಿನ ದಿನಕ್ಕೆ ಬರೆದು ನ್ಯಾಯಾಲಯದ ಕಲಾಪಗಳಲ್ಲಿ ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಯತ್ನಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಅಧಿಕಾರಿಗೆ ಹೈಕೋರ್ಟ್ ದಂಡ ವಿಧಿಸಿದ ಪ್ರಕರಣ ನಡೆದಿದೆ.
ಬಿಬಿಎಂಪಿಯ ಪಟ್ಟಣ ಯೋಜನೆಯ ಮಾಜಿ ಜಂಟಿ/ಹೆಚ್ಚುವರಿ ನಿರ್ದೇಶಕ ಎಂ.ಬಿ.ತಿಪ್ಪಣ್ಣಗೆ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರು ನ್ಯಾಯಾಲಯದ ನಿಯಮ ಮೀರಿದ್ದಕ್ಕಾಗಿ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡದ ಮೊತ್ತವನ್ನು ಇನ್ನೆರಡು ವಾರಗಳಲ್ಲಿ ಪಾವತಿಸುವಂತೆ ಹೇಳಿದೆ.
ಪ್ರಕರಣ ವಿಲೇವಾರಿ ಮಾಡಿದ ನ್ಯಾಯಾಲಯ, ಒಂದು ಲಕ್ಷ ದಂಡದಲ್ಲಿ 50,000ವನ್ನು ದೂರು ನೀಡಿದವರಿಗೆ ಮತ್ತು ಕೋರ್ಟ್ ವಿಚಾರಣೆ ಖರ್ಚಿನ ಬಾಬ್ತು 25,000 ರೂಪಾಯಿಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆ ಪ್ರಾಧಿಕಾರಕ್ಕೆ ನೀಡಬೇಕು.ಉಳಿದ 25,000 ರೂಪಾಯಿಗಳನ್ನು ಬೆಂಗಳೂರಿನ ವಕೀಲರ ಸಂಘದ ಅಭಿವೃದ್ಧಿ ನಿಧಿಗೆ ನೀಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿದೆ.