ಬೆಂಗಳೂರು: ಮೋಟಾರ್ ವೆಹಿಕಲ್ ತೆರಿಗೆ ಪಾವತಿ ಮಾಡುವುದರಿಂದ ರಾಜ್ಯ ಸರ್ಕಾರ ಬಿಎಂಟಿಸಿಗೆ ವಿನಾಯಿತಿ ನೀಡಿದ್ದು, ಸಂಸ್ಥೆಗೆ ಪ್ರಸಕ್ತ ಸಾಲಿನಲ್ಲಿ 120 ಕೋಟಿ ಉಳಿತಾಯವಾಗಲಿದೆ.
ಪ್ರಸಕ್ತ ಸಾಲಿನಲ್ಲಿ ಬಿಎಂಟಿಸಿ 120 ಕೋಟಿ ರೂಪಾಯಿ ಮೋಟಾರ್ ವೆಹಿಕಲ್ ತೆರಿಗೆಯನ್ನು ಪಾವತಿ ಮಾಡಬೇಕಿತ್ತು. ಆದರೆ ಕಳೆದ 5 ವರ್ಷಗಳಿಂದ ತೆರಿಗೆ ವಿನಾಯಿತಿ ನೀಡುವ ಬಿಎಂಟಿಸಿ ಮನವಿಗೆ ರಾಜ್ಯ ಸರ್ಕಾರ ಈಗ ಸ್ಪಂದಿಸಿದ್ದು, ವಿನಾಯಿತಿ ನೀಡಿದೆ. ಇದು ಕೇವಲ ಒಂದು ವರ್ಷಕ್ಕೋ ಅಥವಾ 5 ವರ್ಷಗಳಿಗೋ ಎಂಬ ಅನುಮಾನ ಇದೆ ಎಂದು ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ್ ಯಾದವ್ ಹೇಳಿದ್ದಾರೆ.
ವಾಯುವ್ಯ ಹಾಗೂ ಈಶಾನ್ಯ ಸಾರಿಗೆಗಳಿಗೆ ಈಗಾಗಲೇ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇದೇ ಮಾದರಿಯಲ್ಲಿ ಬಿಎಂಟಿಸಿಗೂ ಮೋಟಾರ್ ವೆಹಿಕಲ್ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈಗ ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿದೆ. ವಾಯುವ್ಯ ಹಾಗೂ ಈಶಾನ್ಯ ಸಾರಿಗೆಗಳಿಗೆ ನೀಡಿದಂತೆ ಬಿಎಂಟಿಸಿಗೂ 5 ವರ್ಷಗಳ ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ನಾಗರಾಜ್ ಯಾದವ್ ತಿಳಿಸಿದ್ದಾರೆ.
ಬಿಎಂಟಿಸಿ 6,500 ಬಸ್ ಗಳಿಗೆ ತೆರಿಗೆ ಪಾವತಿ ಮಾಡಬೇಕಿದ್ದು ಸಂಸ್ಥೆಗೆ ಬರುವ ಆದಾಯದ ಪೈಕಿ ಶೇ.3 ರಷ್ಟು ಆದಾಯವನ್ನು ತೆರಿಗೆಗಾಗಿಯೇ ಪಾವತಿ ಮಾಡಬೇಕಿದೆ. ಇತ್ತೀಚಿನ ಬ್ಯಾಲೆನ್ಸ್ ಶೀಟ್ ಪ್ರಕಾರ ಬಿಎಂಟಿಸಿ 200 ಕೋಟಿ ರೂ ಸಾಲದಲ್ಲಿದ್ದು, ತೆರಿಗೆ ವಿನಾಯಿತಿ ಉಪಯೋಗವಾಗಲಿದೆ ಎಂದು ಕೆಎಸ್ ಆರ್ ಟಿಸಿ ನೌಕರರು ಹಾಗೂ ಸಿಬ್ಬಂದಿ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಹೆಚ್ ವಿ ಅನಂತ ಸುಬ್ಬರಾವ್ ಹೇಳಿದ್ದು, ನೌಕರರಿಗೆ ನೀಡಬೇಕಿದ್ದ ಬಾಕಿ ಮೊತ್ತ 212 ಕೋಟಿ ಇದೆ. ಈಗ ಸರ್ಕಾರ ತೆರಿಗೆ ವಿನಾಯಿತಿ ನೀಡಿರುವುದು ಬಾಕಿ ಮೊತ್ತವನ್ನು ಪಾವತಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.