ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ಚಂದ್ರಾ ಲೇಔಟ್ ಸಮೀಪದ ಬ್ಯಾಟರಾಯನಪುದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಉದಯ್ ಎಂಬಾತ ಟ್ರಾವೆಲ್ ಎಜೆನ್ಸಿಗೆ ಸೇರಿದ ಇನ್ನೋವಾ ಕಾರು ಡ್ರೈವಿಂಗ್ ಮಾಡಿ ನಾಲ್ಕು ವಾಹನಗಳಿಗೆ ಹಾನಿ ಉಂಟು ಮಾಡಿದ್ದಾನೆ.
ಅಪಘಾತದಿಂದ ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾತ್ರಿ ಸುಮಾರು 11.30 ರ ವೇಳೆಗೆ ಈ ಘಟನೆ ಸಂಭವಿಸಿದೆ. ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಉದಯ್ ಆಟೋಗೆ ಡಿಕ್ಕಿ ಹೊಡೆದಿದ್ದಾನೆ, ಅದಕ್ಕೂ ಮುನ್ನ ರಸ್ತೆ ಬದಿಯಲ್ಲಿದ್ದ ಪಾನ್ ಬೀಡಾ ಅಂಗಡಿಗೆ ಗುದ್ದಿದ್ದಾನೆ, ಈ ವೇಳೆ ಬೈಕ್ ಸವಾರರು ಗಾಯಗೊಂಡಿದ್ದು, ಆಟೋ ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದಯ್ ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಆತ ಮದ್ಯ ಸೇವಿಸಿದ್ದ ಎಂಬುದು ದೃಢ ಪಟ್ಟಿದೆ. ಗಾಯಾಳುಗಳನ್ನು ವಿಜಯನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಯಾಣಿಕರನ್ನು ಅವರ ಸ್ಥಳಕ್ಕೆ ಬಿಟ್ಟಪ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಮಾಗಡಿ ರಸ್ತೆಯಲ್ಲಿರುವ ನನ್ನ ಮನೆ ಕಡೆ ಹೋಗುತ್ತಿದ್ದೆ, ಈ ವೇಳೆ ಕಾರು ಬಂದು ನನ್ನ ಆಟೋಗೆ ಡಿಕ್ಕಿ ಹೊಡೆಯಿತು, ಇದರಿಂದ ನಾನು ಪ್ರಜ್ಞೆ ಕಳೆದು ಕೊಂಡೆ , ಸ್ವಲ್ಪ ಸಮಯದ ನಂತರ ನನಗೆ ಏನಾಯಿತು ಎಂಬುದರ ಬಗ್ಗೆ ತಿಳಿಯಿತು ಎಂದು ಸುರೇಶ್ ಎಂಬ ಆಟೋ ಚಾಲಕ ಘಟನೆ ಬಗ್ಗೆ ವಿವರಿಸಿದ್ದಾನೆ.