ರಾಜ್ಯ

ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯಕ್ಕಾಗಿ 2 ಕೋಟಿ ರು. ಲಂಚ: ಕಾರಾಗೃಹ ಇಲಾಖೆ ಡಿಐಜಿ ಡಿ.ರೂಪಾ ಪತ್ರ

Shilpa D
ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾಗೆ ವಿಶೇಷ ಆತಿಥ್ಯ ಒದಗಿಸಲು 2 ಕೋಟಿ ರು ಲಂಚ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿ.ಕೆ.ಶಶಿಕಲಾಗೆ  ವಿಶೇಷ ಆತಿಥ್ಯ ನೀಡಲು ಕಾರಾಗೃಹಗಳ ಇಲಾಖೆಯ ಡಿಜಿಪಿ ಎಚ್‌. ಎನ್‌.ಸತ್ಯನಾರಾಯಣರಾವ್ 2 ಕೋಟಿ ಲಂಚ ಪಡೆದಿದ್ದಾರೆ ಎಂದು ಕಾರಾಗೃಹ ಇಲಾಖೆಯ ಡಿಐಜಿ ಡಿ.ರೂಪಾ ಆರೋಪಿಸಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆಯಾಗಿರುವ ಶಶಿಕಲಾಗೆ ವಿಶೇಷ ಅಡುಗೆ ಮನೆ ಕಲ್ಪಿಸಲಾಗಿದೆ. ಇದು ಕಾರಾಗೃಹ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಯಾಗುತ್ತದೆ. ಈ ಕಾರ್ಯಕ್ಕೆ ರು. 2 ಕೋಟಿ ಲಂಚ ಕೊಡಲಾಗಿದೆ ಎಂಬ ಮಾತಿದ್ದು, ಈ ಹಣವನ್ನು ಕಾರಾಗೃಹ ಇಲಾಖೆ ಡಿಜಿಪಿ ಸತ್ಯನಾರಾಯಣ್ ರಾವ್ ಅವರಿಗೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೈಲಿನ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ಮೇಲೆ  ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲು ಕೋರಿದೆ’ ಎಂದು  ರೂಪಾ ಡಿಜಿಪಿ ಸತ್ಯನಾರಾಯಣ ರಾವ್ ಅವರಿಗೆ ಪತ್ರದಲ್ಲಿ ಬರೆದಿದ್ದಾರೆ.
ಇದೇ ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಯಾ ಅವರಿಗೂ ರೂಪಾ ಅವರು ಕಳುಹಿಸಿದ್ದಾರೆ.
ನಾನು ಅಧಿಕಾರ ವಹಿಸಿಕೊಂಡಾಗಿನಿಂದಲೂ ತಮ್ಮ ಕರ್ತವ್ಯದಲ್ಲಿ ಹಿರಿಯ ಅಧಿಕಾರಿ ಸತ್ಯನಾರಾಯಣ್ ರಾವ್ ಒಂದಲ್ಲ ಒಂದು ರೀತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರೂಪಾ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ನಾನು ಕಾರಾಗೃಹ ಪರಿಶೀಲನೆ ವೇಳೆ 25 ಕೈದಿಗಳಿಗೆ ಡ್ರಗ್ಸ್ ಸೇವನೆ ಪರೀಕ್ಷೆ ನಡೆಸಲಾಯಿತು. ಅದರಲ್ಲಿ 18 ಕೈದಿಗಳು ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ, ಛಾಪಾ ಕಾಗದ ಪ್ರಕರಣ ಮುಖ್ಯ ಆರೋಪಿ ಅಬ್ದುಲ್‌ ಕರಿಂ ಲಾಲ್‌ ತೆಲಗಿ, ಆರು ತಿಂಗಳ ಹಿಂದೆ ವ್ಹೀಲ್‌ಚೇರ್‌ ಉಪಯೋಗಿಸುತ್ತಿದ್ದಾಗ ಸಹಾಯಕರನ್ನು ಕೊಡಬಹುದೆಂದು ಕೋರ್ಟ್‌ ಹೇಳಿತ್ತು. ಈಗ ಆತ ಚೆನ್ನಾಗಿಯೇ ಓಡಾಡುತ್ತಿದ್ದಾನೆ. ಆದರೂ, ಆತನ ಕೋಣೆಯಲ್ಲಿ 3 ರಿಂದ 4 ಮಂದಿ ವಿಚಾರಣಾ ಕೈದಿಗಳಿದ್ದು ಅವನ ಬಾಡಿ ಮಸಾಜ್ ಮಾಡುತ್ತಿದ್ದಾರೆ, ಇದು ಡಿಜಿಪಿ ಅವರ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ತಿಳಿದು ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಸತ್ಯನಾರಾಯಣರಾವ್, ಈ ಆರೋಪಗಳೆಲ್ಲವೂ ಆಧಾರರಹಿತ, ಯಾರು ಈ ಆರೋಪ ಮಾಡಿದ್ದಾರೋ ಅವರು ಈ ಸಂಬಂಧ ಸೂಕ್ತ ಸಾಕ್ಷ್ಯಾಧಾರ ಒದಗಿಸಲಿ ಎಂದು ಹೇಳಿದ್ದಾರೆ.
SCROLL FOR NEXT