ಬೆಂಗಳೂರು: ಹಣವೊಂದಿದ್ದರೇ ಸಾಕು, ಕೈದಿಗಳಿಗೆ ಕೇಂದ್ರ ಕಾರಾಗೃಹದಲ್ಲಿ ಸಿಗರೇಟ್, ಮಧ್ಯ, ಹಾಗೂ ಡ್ರಗ್ಸ್ ಎಲ್ಲವೂ ಸಿಗುತ್ತದೆ. ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಜೈಲಿನಲ್ಲಿ ಮೊಬೈಲ್ ಫೋನ್ ಗಳು ಕೂಡ ಪತ್ತೆಯಾಗಿವೆ.
ಜೈಲಿನ ಕ್ಯಾಂಟೀನ್ ಒಳಗೆ ಸಿಗರೇಟ್ ಕೂಡ ಸಿಗುತ್ತದೆ ಎಂದು ಮೂಲಗಳು ತಿಳಿಸಿವೆ, ಕಲ್ಲಂಗಡಿ, ಪಪ್ಪಾಯ,ಮತ್ತು ಎಳನೀರಿನ ಜೊತೆ ಡ್ರಗ್ಸ್ ಮತ್ತು ಸಿಮ್ ಕಾರ್ಡ್ ಗಳನ್ನ ಸಾಗಿಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಸ್ಕ್ಯಾನರ್ ಯಂತ್ರಗಳಿದ್ದರೂ, ಕೈದಿಗಳು ತಮ್ಮ ಕೌಶಲ್ಯ ಉಪಯೋಗಿಸಿ, ಜೈಲಿನ ಭದ್ರತಾ ಸಿಬ್ಬಂದಿಯನ್ನು ಯಾಮಾರಿಸಿ ಹೇಗೋ ಕಾರಾಗೃಹದೊಳಗೆ ತರುತ್ತಾರೆ.
ಒಂದು ಸಿಗರೇಟ್ ಬೆಲೆ 35 ರಿಂದ 50 ರು ಇರುತ್ತದೆ. ಒಂದು ಬಾಟಲ್ ಮದ್ಯದ ಬೆಲೆ ಬ್ರ್ಯಾಂಡ್ ಮೇಲೆ ಅವಲಂಬಿತವಾಗಿರುತ್ತದೆ.ಅಂದರೆ 300 ರು ನಿಂದ 3ಸಾವಿರ ರು ಇರುತ್ತದೆ, ಸಿಮ್ ಕಾರ್ಡ್ ಪಡೆಯಲು ಕೈದಿಗಳು 1 ಸಾವಿರ ರು ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾದಿಕಾರ ಮತ್ತು ನಿಮ್ಹಾನ್ಸ್ ಸಮೀಕ್ಷೆ ನಡೆಸಿತ್ತು. 721 ಕೈದಿಗಳಿಗೆ ವಿವಿಧ ಪರೀಕ್ಷೆಗೊಳಪಡಿಸಲಾಗಿತ್ತು. ಅದರಲ್ಲಿ 442 ಕೈದಿಗಳು ಕೊಕೇನ್, ಅಪೀಮು ಸೇರಿದಂತೆ ಇತರ ಮಾದಕ ವಸ್ತುಗಳ ದಾಸರಾಗಿದ್ದರು. ಅದರಲ್ಲಿ ಶೇ. 51.5 ರಷ್ಟು ಕೈದಿಗಳು ಮದ್ಯ ವ್ಯಸನಿಗಳು ಮತ್ತು ಶೇ.67.3 ರಷ್ಟು ಕೈದಿಗಳು ಧೂಮಪಾನಕ್ಕೆ ದಾಸರಾಗಿದ್ದರು ಎಂದು ಅಧ್ಯಯನದಲ್ಲಿ ತಿಳಿದು ಬಂದಿತ್ತು.