ರಾಜ್ಯ

ಪಾನಮತ್ತ ಟ್ರಾಫಿಕ್ ಪೊಲೀಸ್ ನಿಂದ ನಮ್ಮ ಮೆಟ್ರೊ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ; ಬಂಧನ

Sumana Upadhyaya
ಬೆಂಗಳೂರು: ಮದ್ಯಪಾನ ಮಾಡಿ ಮೆಟ್ರೊ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ನ್ನು ನಿನ್ನೆ ಬಂಧಿಸಲಾಗಿದೆ. ಮೊನ್ನೆ ರಾತ್ರಿ 8.30ರ ಸುಮಾರಿಗೆ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಜಿ.ಎಚ್. ವೀರಣ್ಣ ಹೊಸಹಳ್ಳಿ ಮೆಟ್ರೊ ಸ್ಟೇಷನ್ ಗೆ ಆಗಮಿಸಿದ್ದರು. ಆಗ ಸೆಕ್ಯುರಿಟಿ ಗಾರ್ಡ್ ಭೀಮಪ್ಪ ಕಿಲಾರಿ ಭದ್ರತಾ ತಪಾಸಣೆ ನಡೆಸಲು ಮುಂದಾದರು.
ಅದಕ್ಕೆ ಪೊಲೀಸ್ ಕಾನ್ಸ್ಟೇಬಲ್ ವೀರಣ್ಣ ನಿರಾಕರಿಸಿ ಕಿಲಾರಿ ಮೇಲೆ ಹಲ್ಲೆ ನಡೆಸಿದರು. ಕಿಲಾರಿಯವರ ಸಹೋದ್ಯೋಗಿಗಳು ಮಧ್ಯ ಪ್ರವೇಶಿಸಿ ಜಗಳವನ್ನು ಶಮನಗೊಳಿಸಿದರು. ಕಿಲಾರಿ ನಂತರ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅದರ ಮೇರೆಗೆ ವೀರಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ 20 ದಿನಗಳಿಂದ ಆರೋಗ್ಯವಿಲ್ಲವೆಂದು ರಜೆಯಲ್ಲಿದ್ದ ವೀರಣ್ಣ ಅಂದು ಕಚೇರಿ ಕೆಲಸದಲ್ಲಿರಲಿಲ್ಲ. ಪಾನಮತ್ತರಾಗಿದ್ದ ಅವರನ್ನು ಮೆಟ್ರೊ ನಿಲ್ದಾಣದೊಳಗೆ ಹೋಗಲು ಭದ್ರತಾ ಸಿಬ್ಬಂದಿ ಬಿಡಲಿಲ್ಲ. ಇದರಿಂದಾಗಿ ಅವರು ಕೋಪಗೊಂಡು ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 341,323,504,506ರಡಿಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಬೇರೆ ಆರೋಪಿಗಳಂತೆಯೇ ನೋಡಿಕೊಳ್ಳಲಾಗುವುದು.ಕಾನೂನು ಕ್ರಮವನ್ನು ಅನುಸರಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
SCROLL FOR NEXT