ರಾಜ್ಯ

ಪರಪ್ಪನ ಅಗ್ರಹಾರ ಅಕ್ರಮ ಪ್ರಕರಣ: ಕೃಷ್ಣ ಕುಮಾರ್ ಕಲಬುರ್ಗಿಗೆ, ಅನಿತಾ ಧಾರವಾಡಕ್ಕೆ ಎತ್ತಂಗಡಿ

Lingaraj Badiger
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರಾಗಿದ್ದ ಕೃಷ್ಣಕುಮಾರ್ ಅವರನ್ನು ಕಲಬುರ್ಗಿಗೆ ಹಾಗೂ ಅಧೀಕ್ಷಕಿ ಡಾ.ಆರ್. ಅನಿತ್ ಅವರನ್ನು ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿದೆ.
ಅಕ್ರಮಗಳ ಬಗ್ಗೆ ವರದಿ ನೀಡಿದ್ದ ಬಂಧಿಖಾನೆ ಡಿಐಜಿ ಡಿ.ರೂಪಾ ಮತ್ತು ಡಿಜಿಪಿ ಸತ್ಯನಾರಾಯಣರಾವ್ ಅವರು ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ ಬೆನ್ನಲ್ಲೇ ಕೃಷ್ಣ ಕುಮಾರ್ ಅವರನ್ನು ಯಾವುದೇ ಸ್ಥಳ ನಿಯುಕ್ತಿಗೊಳಿಸಿದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಇಂದು ಕೃಷ್ಣ ಕುಮಾರ್ ಅವರನ್ನು ಕಲಬುರ್ಗಿ ಕಾರಗೃಹ ಮುಖ್ಯ ಅಧೀಕ್ಷಕರಾಗಿ ವರ್ಗಾವಣೆ ಮಾಡಿದ್ದು, ಕಲಬುರ್ಗಿ ಕಾರಗೃಹ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ.
ಇನ್ನು ಪರಪ್ಪನ ಅಗ್ರಹಾರ ಮುಖ್ಯ ಅಧೀಕ್ಷಕಿಯಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದ ಆರ್ ಅನಿತಾ ಅವರು ಅಕ್ರಮದಲ್ಲಿ ಭಾಗಿಯಾಗಿದ್ದು, ಅವರನ್ನು ವರ್ಗಾವಣೆ ಮಾಡಬೇಕು ಎಂದು ಖೈದಿಗಳು ಒತ್ತಾಯಿಸಿದ ಬೆನ್ನಲ್ಲೇ ಅನಿತಾ ಅವರನ್ನು ರಾಜ್ಯ ಸರ್ಕಾರ ಧಾರವಾಡ ಕಾರಗೃಹ ಅಧೀಕ್ಷಕಿಯಾಗಿ ವರ್ಗಾವಣೆ ಮಾಡಿದೆ. ಅಲ್ಲದೆ ಧಾರವಾಡ ಜೈಲಿನ ಅಧೀಕ್ಷಕ ಪಿ.ಎಸ್. ರಮೇಶ್ ಅವರನ್ನು ಅನಿತಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಿದೆ.
ಕಳೆದ ಮಂಗಳವಾರ ಪರಪ್ಪನ ಅಗ್ರಹಾರ ಅಕ್ರಮಗಳ ಬಗ್ಗೆ ವರದಿ ನೀಡಿದ್ದ ಬಂಧಿಖಾನೆ ಡಿಐಜಿ ಡಿ.ರೂಪಾ ಅವರನ್ನು ರಾಜ್ಯ ಸರ್ಕಾರ ಸಂಚಾರ ಮತ್ತು ರಸ್ತೆ ಸುರಕ್ಷತಾ ಡಿಐಜಿಯಾಗಿ ವರ್ಗಾವಣೆ ಮಾಡಿತ್ತು. ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ಅವರಿಗೆ ಯಾವುದೇ ಸ್ಥಾನ ನೀಡದೆ ಕಾರಾಗೃಹ ಡಿಜಿಪಿ ಸ್ಥಾನದಿಂದ ತೆರವುಗೊಳಿಸಿತ್ತು.
SCROLL FOR NEXT