ಬೆಂಗಳೂರು: ಬರ ಪರಿಹಾರ ನಿಧಿಗಾಗಿ ಕೇಂದ್ರ ಹಣಕಾಸು ಆಯೋಗ ಯಾವ ಮಾನದಂಡವಿಲ್ಲದೇ ಶಿಫಾರಸು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಿಎಂ, 2015-16 ರಿಂದ 2019-20 ರ ವರೆಗೆ ಐದು ವರ್ಷಗಳಿಗಾಗಿ ರಾಜ್ಯಕ್ಕೆ 1,527 ಕೋಟಿ ರು.ವಿಪತ್ತು ಪರಿಹಾರ ಹಣ ನಿಧಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೇ ಇದು ಗಣನೀಯವಾಗಿ ಕಡಿಮೆಯಾಗಿದೆ. ಆಂಧ್ರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮತ್ತು ಗುಜರಾತ್ ಗಳಿಗಿಂತ ಕಡಿಮೆಯಾಗಿದೆ.
ಕರ್ನಾಟಕ ಶೇ.60 ರಷ್ಟು ಭೌಗೋಳಿಕವಾಗಿ ಬರಪೀಡಿತವಾಗಿದೆ. ಆದರೂ ಕರ್ನಾಟಕಕ್ಕೆ ಕಡಿಮೆ ಹಣ ಬಿಡುಗಡೆ ಮಾಡಲಾಗಿದೆ. ಕರ್ನಾಟಕ, ಆಂಧ್ರ, ಮತ್ತು ರಾಜಸ್ತಾನಗಳ 24 ರಲ್ಲಿ 16 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿದ್ದಾರೆ. ರಾಜಸ್ತಾನಕ್ಕೆ ಹೋಲಿಸಿದರೇ ಕರ್ನಾಟಕದಲ್ಲಿ ನೀರಾವರಿ ಪ್ರಮಾಣ ಕಡಿಮೆಯಿದೆ.
ಕಳೆದ ಆರು ವರ್ಷಗಳ ಮಾಹಿತಿ ಆಧಾರದ ಮೇಲೆ ನಿರ್ಧರಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪರಿಹಾರ ನಿಧಿಯಡಿಯಲ್ಲಿ ವಾರ್ಷಿಕವಾಗಿ ರು. 215.74 ಕೋಟಿ ಬಿಡುಗಡೆ ಮಾಡಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ರು.1,029.28 ಕೋಟಿ ರು ಬಿಡುಗಡೆ ಮಾಡಲಾಗಿದೆ. ಹಳೆಯ ಅನುಭವದ ಮೇಲೆ ಹಣಕಾಸು ಆಯೋಗ ಶಿಫಾರಸು ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
1990-2005 ರಲ್ಲಿ ಕರ್ನಾಟಕಕ್ಕೆ 3.5 ರಷ್ಟು ವಿಪತ್ತು ಪರಿಹಾರ ನಿಧಿಯಡಿಯಲ್ಲಿ ರು. 1,435.95 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು.2015-2020 ರ ಅವಧಿಯಲ್ಲಿ ಶೇಕಡವಾರು ಹಣ ಬಿಡುಗಡೆ ಕಡಿಮೆಯಾಗಿದ್ದು, ಶೇ.2.4 ರಷ್ಟು ಬಿಡುಗಡೆ ಮಾಡಲಾಗಿತ್ತು. ಅನುದಾನ ಹಂಚಿಕೆ ಮಾಡುವಾಗ ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಸಿಎಂ ಹೇಳಿದ್ದಾರೆ.