ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಪುಷ್ಪಗುಚ್ಛದೊಂದಿಗೆ ಸ್ವಾಗತಿಸುವುದು ಸಾಮಾನ್ಯ ಕ್ರಮ. ತುಮಕೂರಿನ ಶ್ರೀ ಸಿದ್ಧಾರ್ಥ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಪುಷ್ಪಗುಚ್ಛದ ಬದಲಿಗೆ ಖಾದಿಯ ಕೈ ವಸ್ತ್ರ ನೀಡಿ ಅತಿಥಿಗಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ರಾಷ್ಟ್ರ ಮತ್ತು ರಾಜ್ಯ ರಾಷ್ಟ್ರೀಯ ಸೇವಾ ಯೋಜನೆಯ ಸಮನ್ವಯಾಧಿಕಾರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೊನ್ನೆ ಶುಕ್ರವಾರ ಕಾಲೇಜಿನ ಮುಖ್ಯಸ್ಥರು ಅವರಿಗೆ ಖಾದಿ ಟವಲ್ ನ್ನು ನೀಡಿ ಸ್ವಾಗತಿಸಿದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಉಪ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ, ತಿಂಗಳ ಹಿಂದೆ, ತಮ್ಮ ಸ್ನೇಹಿತರೊಬ್ಬರು ಅವರ 70ನೇ ಜನ್ಮ ದಿನಾಚರಣೆಗೆ ಟ್ರಕ್ ತುಂಬಾ ಪುಷ್ಪಗುಚ್ಛ ಸಿಕ್ಕಿತ್ತು ಎಂದು ಹೇಳಿದ್ದರು. ಆಗ ನನಗೆ ಯೋಚನೆ ಬಂತು, ಪುಷ್ಪಗುಚ್ಛದ ಬದಲಿಗೆ ಅತಿಥಿಗಳಿಗೆ ಖಾದಿಯ ಕೈ ವಸ್ತ್ರವನ್ನು ಕೊಟ್ಟರೆ ಹೇಗೆ ಎಂದೆನಿಸಿತು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮುಂದೆ ಪ್ರಸ್ತಾಪವಿಟ್ಟಾಗ ಅವರು ಅದನ್ನು ಒಪ್ಪಿಕೊಂಡರು ಎಂದು ಹೇಳಿದರು.
ಕಾರ್ಯಕ್ರಮದ ವೇಳೆ ಅತಿಥಿಗಳು ಖಾದಿಯ ಕೈ ವಸ್ತ್ರವನ್ನು ಬಳಸುವುದು ಕಂಡಿತು. ಅವರಿಗೆ ಪುಷ್ಪಗುಚ್ಛ ಕೊಡುತ್ತಿದ್ದರೆ ಕಾರ್ಯಕ್ರಮವಾದ ಮೇಲೆ ಬಿಟ್ಟು ಹೋಗುತ್ತಿದ್ದರು.ನಂತರ ಅದನ್ನು ಎಸೆಯಲಾಗುತ್ತದೆ. ಅನಗತ್ಯ ಕಸ ಸೃಷ್ಟಿಸಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಡಾ.ಶೆಟ್ಟಿ ಹೇಳುತ್ತಾರೆ.
ಹೀಗಾಗಿ ವಿಶ್ವವಿದ್ಯಾಲಯದ ಎಲ್ಲಾ ಕಾರ್ಯಕ್ರಮಗಳಿಗೆ ಬರುವ ಅತಿಥಿಗಳಿಗೆ ಖಾದಿಯ ಕೈ ವಸ್ತ್ರವನ್ನು ನೀಡಿ ಸ್ವಾಗತಿಸುವ ಪದ್ಧತಿ ಜಾರಿಗೆ ಬರಲಿದೆಯಂತೆ.