ಬೆಂಗಳೂರು: ಆನ್ ಲೈನ್ ಮೂಲಕ ಸಾವಿರಾರು ಗ್ರಾಹಕರನ್ನು ವಂಚಿಸುತ್ತಿದ್ದ ಜಾರ್ಖಂಡ್ ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜು ಬಿಟ್ಟ ಯುವಕರೆಂದು ಹೇಳಲಾಗುತ್ತಿರುವ ನಾಲ್ವರ ಕಂಪ್ಯೂಟರ್ ನಲ್ಲಿ 16,000 ಗ್ರಾಹಕರ ಬ್ಯಾಂಕ್ ಖಾತೆಗಳು, ಪ್ಯಾನ್ ಕಾರ್ಡು ಸಂಖ್ಯೆಗಳು ಮತ್ತು 460 ಸಿಮ್ ಕಾರ್ಡುಗಳನ್ನು ಕಂಡ ತನಿಖಾಧಿಕಾರಿಗಳಿಗೆ ನಿಜಕ್ಕೂ ಆಘಾತವಾಗಿತ್ತು. ಹೂಡಿಕೆಯಿಂದ ಹಣ ಸಿಗಲಿದೆ ಎಂದು ಈ ನಾಲ್ವರು ಯುವಕರು ಜನರನ್ನು ವಂಚಿಸುತ್ತಿದ್ದರು.
ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ತನಿಖಾಧಿಕಾರಿಗಳು ಈ ಆನ್ ಲೈನ್ ದಂಧೆಯನ್ನು ಬಯಲಿಗೆಳೆದಿದ್ದು, ತಮ್ಮ ಮೋಸದ ಜಾಲ ಹೆಣೆಯಲು ಆನ್ ಲೈನ್ ಪೋರ್ಟಲ್ ಮೂಲಕ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮತ್ತು ಇತರ ಗೃಹೋಪಯೋಗಿ ಸಲಕರಣೆಗಳನ್ನು ಕಡಿಮೆ ಮೊತ್ತಕ್ಕೆ ಆನ್ ಲೈನ್ ಮೂಲಕ ನೀಡುತ್ತಿದ್ದರು. ಗ್ರಾಹಕರ ಖಾತೆ ಸಂಖ್ಯೆಯನ್ನು ಹೊಂದಿದ್ದ 15 ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಮತ್ತು ಹಾರ್ಡ್ ಡಿಸ್ಕ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಗ್ರಾಹಕರು ಹಾಕುವ ಬಂಡವಾಳದ ಮೇಲೆ ಶೇಕಡಾ 2ರಷ್ಟು ಬಡ್ಡಿ ನೀಡುವುದಾಗಿ ಇವರು ಸುಳ್ಳು ಭರವಸೆ ನೀಡಿದ್ದರು.
ಬಂಧಿತರನ್ನು ಜಾರ್ಖಂಡ್ ಮೂಲದ ಬೊಕರೊದ ಅಜಯ್ ಸಿಂಗ್, ಸೂರಜ್ ಕುಮಾರ್, ಸುಶೀಲ್ ಕುಮಾರ್ ಮತ್ತು ಬಿಪ್ಲವ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಉನ್ನತ ವ್ಯಾಸಂಗಕ್ಕೆಂದು 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅವರು ಡಿಪ್ಲೊಮಾಗೆ ಸೇರಿ ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟಿದ್ದರು. ಅವರಲ್ಲಿಬ್ಬರು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು.
ಈ ನಾಲ್ವರ ಗ್ಯಾಂಗ್ ಜನರಿಂದ ಸುಮಾರು 15 ಲಕ್ಷ ರೂಪಾಯಿ ವಂಚಿಸಿರಬಹುದು ಎಂದು ಸಿಐಡಿ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.