ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಬೆಂಗಳೂರು: ನೀವು ದೈಹಿಕವಾಗಿ ಶಕ್ತಿಯುತವಾಗಿ ಹಾಗೂ ಸಮರ್ಥವಾಗಿರಬೇಕು, ನಮ್ಮ ಹಾಗೆ ಹೊಟ್ಟೆ ಬೆಳೆಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಪಡೆಗೆ ಸಲಹೆ ನೀಡಿದ್ದಾರೆ.
ಕರ್ನಾಟಕ ದರ್ಶನ ಸೈಕಲ್ ಜಾಥಾ 28 ಜಿಲ್ಲೆಗಳಲ್ಲಿ ಸಂಚರಿಸಿ ಬೆಂಗಳೂರಿಗೆ ವಾಪಸ್ ಬಂದ 52 ಕೆಎಸ್ ಆರ್ ಪಿ ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದ ಅವರು, ಪೊಲೀಸರಿಗೆ ಫಿಟ್ ನೆಸ್ ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ನೇತೃತ್ವದಲ್ಲಿ ಬೀದರ್ ನಿಂದ ಆರಂಭವಾದ ಕರ್ನಾಟಕ ದರ್ಶನ ಸೈಕಲ್ ಜಾಥಾ 14 ದಿನದಲ್ಲಿ 1750 ಕಿಮೀ ಸಂಚರಿಸಿ ಮಂಗಳವಾರ ನಗರಕ್ಕೆ ಆಗಮಿಸಿತು.
ಫಿಟ್ ನೆಸ್ ಸಮಸ್ಯೆ ಕೆಲವೊಮ್ಮೆ ಇಲಾಖೆಗೆ ಹಾನಿಯುಂಟು ಮಾಡುತ್ತದೆ. ರಜೆಯಿಲ್ಲದೇ 10 ದಿನಗಳಿಗೂ ಹೆಚ್ಚು ಕಾಲ ಸತತ ಕೆಲಸ, ಕೆಲಸದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಫಿಟ್ ನೆಸ್ ನಿರ್ವಹಣೆಗಾಗಿ ಪೊಲೀಸರಿಗೆ ಪ್ರತ್ಯೇಕ ಸಮಯದ ವ್ಯವಸ್ಥೆ ಇರುವುದಿಲ್ಲ.
ಕಳೆದ ವರ್ಷ ಜನವರಿಯಲ್ಲಿ ಚಿಕ್ಕಮಗಳೂರು ಎಸ್ ಪಿ ಜಿಲ್ಲಾ ಪೊಲೀಸರಿಗೆ ಕ್ಯಾರೆಟ್ ಬೆಟ್ ಮಾಡುವಂತೆ ಹೇಳಿದ್ದರು. 5 ತಿಂಗಳಲ್ಲಿ 5 ಕೆಜಿ ತೂಕ ಕಡಿಮೆ ಮಾಡಿಕೊಳ್ಳಬೇಕು, ಇಲ್ಲದಿದ್ದರೇ ವರ್ಗಾವಣೆಗೆ ಶಿಫಾರಸು ಮಾಡುವುದಾಗಿ ಹೇಳಿದ್ದರು. 34 ಪೊಲೀಸರು ಇದನ್ನು ಸವಾಲಾಗಿ ಸ್ವೀಕರಿಸಿದ್ದರು ಅದರಲ್ಲಿ 16 ಮಂದಿ ಯಶಸ್ವಿಯಾದರು.
ಸಮವಸ್ತ್ರದಲ್ಲಿರುವ ಪೊಲೀಸರಿಗೆ ಫಿಟ್ ನೆಸ್ ಅತಿ ಮುಖ್ಯವಾದದ್ದು ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ. ತಮ್ಮ ದೇಹವನ್ನು ಯೋಗ್ಯವಾಗಿಟ್ಟುಕೊಳ್ಳಲು ಪೊಲೀಸರು ಸ್ವಇಚ್ಛೆಯಿಂದ ಮುಂದಾಗಬೇಕು. ಪೊಲೀಸರ ಕೆಲಸದ ಒತ್ತಡದ ನಡುವೆ ಇಲಾಖೆ ಅವರಿಗೆ ಫಿಟ್ ನೆಸ್ ಕಾಪಾಡಬೇಕು ಎಂದು ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಕೆಲಸದ ಒತ್ತಡದ ನಡುವೆ ಪೊಲೀಸರು ದೇಹದ ಬಗ್ಗೆ ಗಮನ ಹರಿಸಲು ಸಾಧ್ಯವಿಲ್ಲ, ಕೆಲ ಪೊಲೀಸ್ ಸಿಬ್ಬಂದಿ ಸುಮಾರು 12-14 ಗಂಟೆಗಳ ಕಾಲ ಕಚೇರಿಯಲ್ಲಿಯೇ ಕುಳಿತಿರಬೇಕಾಗುತ್ತದೆ. ಅಂಥಹ ಸಿಬ್ಬಂದಿ ವಾರದಲ್ಲಿ 2 ದಿನವಾದರೂ ದೈಹಿಕ ವ್ಯಾಯಾಮ ಮಾಡುವುದರ ಕಡೆ ಗಮನ ನೀಡಬೇಕು ಎಂದು ನಿವೃತ್ತ ಡಿಜಿ ಟಿ. ರಮೇಶ್ ಹೇಳಿದ್ದಾರೆ.
ಇದು ಕೇವಲ ಕಿರಿಯ ಸಿಬ್ಬಂದಿಗೆ ಮಾತ್ರವಲ್ಲ ಹಿರಿಯ ಅಧಿಕಾರಿಗಳು ಕೂಡ ಶೇಪ್ ಮೈಂಟೈನ್ ಮಾಡಬೇಕು ಎಂದು ಹೇಳಿದ್ದಾರೆ. ತಮ್ಮ ಡೆಸ್ಕ್ ನಲ್ಲಿ ಕುಳಿತು ಯಾವಾಗಲೂ ಕೆಲಸ ಮಾಡುವ ಬದಲು ಆಧಿಕಾರಿಗಳು ಗಸ್ತು ತಿರಗಬೇಕು ಎಂದು ಸಲಹೆ ನೀಡಿದರು.