ಬೆಂಗಳೂರು: ಶಿಕ್ಷಕಿಯರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಬಾಲ್ಡ್'ವಿನ್ ಬಾಲಕಿಯರ ಶಾಲೆಯ ಪ್ರಾಂಶುಪಾಲೆ ಸಲೋಮಿ ರಾಕೇಶ್ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ನೂತನವಾಗಿ ನೇಮಕಗೊಂಡಿರುವ ಪ್ರಾಂಶುಪಾಲೆ ಕಿರುಕುಳ ನೀಡುತ್ತಿದ್ದಾರೆಂದು ಶಿಕ್ಷಕರು ಆರೋಪ ಮಾಡಿದ್ದರು. ಅಲ್ಲದೆ, ಕಳೆದೆರಡು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಶಾಲಾ ಮಕ್ಕಳೂ ಕೂಡ ಶಿಕ್ಷಕರೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ರಾಜೀನಾಮೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ಸಲೋಮಿ ರಾಕೇಶ್ ಅವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಇದೀಗ ಶಿಕ್ಷಕರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ನಿನ್ನೆಯಷ್ಟೇ ಕೆಲ ಶಿಕ್ಷಕರು ಸಲೋಮಿ ರಾಕೇಶ್ ಅವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಶಾಲೆಯ ಅವಧಿ ಮುಗಿದ ಬಳಿಕವೂ ಹೆಚ್ಚುವರಿ ತರಗತಿ ತೆಗೆದುಕೊಳ್ಳುವಂತೆ ಸಲೋಮಿ ಹಿಂಸಿಸುತ್ತಿದ್ದರು. ಇತ್ತೀಚೆಗಷ್ಟೇ ಶಿಕ್ಷಕರ ಸಭೆ ಕರೆದಿದ್ದ ಸಲೋಮಿಯವರು ಮಕ್ಕಳಿಕೆ ಶಿಕ್ಷಿಸುವ ಹಾಗೆ ಶಿಕ್ಷಕರನ್ನು ಕೊಠಡಿಯಿಂದ ಆಚೆ ನಿಲ್ಲಿಸಿದ್ದರು.
ಗಂಟೆಗಟ್ಟಲೆ ನಿಲ್ಲಿಸಿದ ಕಾರಣಕ್ಕೆ ರಕ್ತದೊತ್ತಡ ಹೆಚ್ಚಾಗಿ ಶಿಕ್ಷಕಿಯೊಬ್ಬರು ಕುಸಿದು ಬಿದ್ದಿದ್ದರು ಎಂದು ಹೇಳಿದ್ದರು. ಸಲೋಮಿಯವರು ರಾಜೀನಾಮೆ ನೀಡದಿದ್ದರೆ, ಮಹಿಳಾ ಆಯೋಗದ ಮೆಟ್ಟಿಲೇರುವುದಾಗಿಯೂ ಬೆದರಿಕೆ ಹಾಕಿದ್ದರು. ಈ ಎಲ್ಲಾ ಬೆಳವಣಿಗೆಯ ಹಿನ್ನಲೆಯಲ್ಲಿ ಇದೀಗ ಸಲೋಮಿ ರಾಕೇಶ್ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.