ಬೆಂಗಳೂರು: ಉತ್ತರ ಪ್ರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಆಹಾರ ಇಲಾಖೆ ಆಯುಕ್ತ ಅನುರಾಗ್ ತಿವಾರಿ ಬೋಗಸ್ ರೇಷನ್ ಕಾರ್ಡ್ ಹಗರಣದ ತನಿಖೆ ನಡೆಸುತ್ತಿದ್ದರು ಎಂದು ನವಭಾರತ್ ಡೆಮಾಕ್ರಟಿಕ್ ಪಾರ್ಟಿ ಕಾರ್ಯದರ್ಶಿ ರೊನಾಲ್ಡೋ ಸೋನ್ಸ್ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಅವರು, 2017 ಜೂನ್ 11 ರಂದು ಚಾರ್ಜ್ ತೆಗೆದುಕೊಂಡ ತಿವಾರಿ ಅಂದಿನಿಂದ ಸಾಯುವವರೆಗೂ ಅದರ ಸಂಬಂಧ ತನಿಖೆ ನಡೆಸುತ್ತಿದ್ದರು, ಈ ಹಗರಣ 1ಸಾವಿರ ಕೋಟಿಗೂ ಅಧಿಕ ಮೌಲ್ಯದ್ದಾಗಿದೆ, ಆದರೆ ರಾಜ್ಯ ಸರ್ಕಾರ ಆಹಾರ ಇಲಾಖೆಯಲ್ಲಿ ಯಾವುದೇ ಹಗರಣ ಇಲ್ಲ ಎಂದು ವಾದಿಸುತ್ತಲೇ ಬಂದಿದೆ. ಹೇಗೆ ಈ ರೀತಿಯ ಹೇಳಿಕೆಗಳನ್ನು ಸರ್ಕಾರ ನೀಡುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು, ಸರ್ಕಾರ ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 2016ರ ಜೂನ್ ನಲ್ಲಿ ಸರ್ಕಾರ ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದೊಡನೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಾಫ್ಟ್ ವೇರ್ ಜನರೇಟೆಡ್ ಕೂಪನ್ ಗಳನ್ನು ನೀಡಿ, ಪಡಿತರ ಕೇಂದ್ರಗಳಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವಂತೆ ಅವಕಾಶ ಕಲ್ಪಿಸಿತ್ತು.
ರೇಷನ್ ಕಾರ್ಡ್ ಹೊಂದಿರುವ ಕುಟುಂಬವನ್ನು ಆಧಾರ್ ಕಾರ್ಡ್ ಜೊತೆ ಸಂಪರ್ಕ ಕಲ್ಪಿಸಿತ್ತು. ಕುಟುಂಬದ ಸದಸ್ಯರ ಹೆಬ್ಬೆರಳು ಗುರುತನ್ನು ಕೂಪನ್ ಗೆ ಅಳವಡಿಸಲಾಗಿತ್ತು.
ಆಧಾರ್ ಕಾರ್ಡ್ ನಂಬರ್ ಮತ್ತು ಸಾಫ್ಟ್ ವೇರ್ ಜೊತೆ ಅನೇಕ ಸಮಸ್ಯೆಗಳಿದ್ದವು, ಆಧಾರ್ ಕಾರ್ಡ್ ನಂಬರ್ ಹಲವು ರೇಷನ್ ಕಾರ್ಡ್ ಗಳ ಜೊತೆ ಲಿಂಕ್ ಹೊಂದಿತ್ತು. ಈ ವಿಷಯ ಗೊತ್ತಿರದ ಕೆಲವರು ಅವರ ಕೂಪನ್ ಬಳಸಿ ಪಡಿತರ ಪಡೆಯುತ್ತಿದ್ದರು. ನವೆಂಬರ್ ನಲ್ಲಿ ನಾವು ಈ ಸಂಬಂಧ ಆರ್ ಟಿ ಐ ಮಾಹಿತಿ ಕೋರಿದ್ದೆವು. ಆದರೆ ಸರ್ಕಾರ ಎಷ್ಟು ಪ್ರಮಾಣದಲ್ಲಿ ಬೋಗಸ್ ರೇಷನ್ ಕಾರ್ಡ್ ಹಂಚಿಕೆ ಮಾಡಿದೆ ಎಂಬ ಬಗ್ಗೆ ಸರಿಯಾದ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಉತ್ತರ ಪ್ರದೇಶ ವಿಶೇಷ ತನಿಖಾ ತಂಡದಿಂದ ಇಬ್ಬರು ಪೊಲೀಸ್ ಅಧಿಕಾರಿಗಳು ಇಂದು ನಗರಕ್ಕೆ ಆಗಮಿಸಿದ್ದಾರೆ. ಕರ್ನಾಟಕ-ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಲಕ್ನೋದಲ್ಲಿ ಕಳೆದ ತಿಂಗಳು 17ರಂದು ತಮ್ಮ 36ನೇ ಹುಟ್ಟುಹಬ್ಬದಂದು ಮೀರಾ ಬಾಯ್ ಅತಿಥಿ ಗೃಹದ ಸಮೀಪ ರಸ್ತೆ ಬದಿಯಲ್ಲಿ ಶವವಾಗಿ ಸಿಕ್ಕಿದ್ದರು.
ವಿಶೇಷ ತನಿಖಾ ತಂಡದಲ್ಲಿ ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವಿನಾಶ್ ಮಿಶ್ರಾ, ಇನ್ಸ್ ಪೆಕ್ಟರ್ ಆನಂದ್ ಶಾಹಿ ಸೇರಿದ್ದಾರೆ. ಇವರ ಜೊತೆ ತಿವಾರಿ ಸೋದರ ಮಾಯಾಂಕ್ ಕೂಡ ಇದ್ದಾರೆ. ತಿವಾರಿಯವರು ಮೃತಪಟ್ಟ ನಂತರ ಸಾಮಾನ್ಯ ತನಿಖೆಯಾಗಿ ತನಿಖಾ ತಂಡದ ಅಧಿಕಾರಿಗಳು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿದ್ದಾರೆ. ತಿವಾರಿಯವರ ಕೊನೆಯ ಕಚೇರಿಯನ್ನು ಭೇಟಿ ಮಾಡಿದ್ದಲ್ಲದೆ ಮುಖ್ಯ ಕಾರ್ಯದರ್ಶಿಯವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.