ರಾಜ್ಯ

ಪಿಎಸ್ ಐ ಬೇಬಿ - ಬಿಜೆಪಿ ಶಾಸಕರ ಪ್ರಣಯ ಪ್ರಸಂಗ: ಮಹಿಳಾ ಆಯೋಗಕ್ಕೆ ಪತ್ನಿ ದೂರು?

Lingaraj Badiger
ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ಹಾಗೂ ಪಿಎಸ್ಐ ಬೇಬಿ ವಾಲೇಕರ್ ಅವರ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಪತ್ನಿ ಸೌಮ್ಯ ಹೆಸರಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬಂದಿದೆ. ಆದರೆ ಮಹಿಳಾ ಆಯೋಗಕ್ಕೆ ನಾನು ಯಾವುದೇ ಪತ್ರ ಅಥವಾ ದೂರು ನೀಡಿಲ್ಲ ಎಂದು ಸೌಮ್ಯ ಸ್ಪಷ್ಟಪಡಿಸಿದ್ದಾರೆ.
ನೊಂದ ಪತ್ನಿ ಸೌಮ್ಯ ಹೆಸರಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ಮಾರ್ಚ್ 16ರಂದು ದೂರಿನ ಪತ್ರ ಬಂದಿದ್ದು, ಇದರಲ್ಲಿ ತಿಪ್ಪರಾಜು ಮತ್ತು ಪಿಎಸ್ಐ ಬೇಬಿ ವಾಲೇಕರ್ ಅವರ ಪ್ರೇಮ ಪ್ರಕರಣದ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಲ್ಲದೆ ನನಗೆ ನ್ಯಾಯ ಸಿಗದಿದ್ದರೆ, ನಾನು ನನ್ನ ಮಕ್ಕಳು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಶಾಸಕ ತಿಪ್ಪರಾಜು ಹವಾಲ್ದಾರ್ ಅವರ ಪತ್ನಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಸೌಮ್ಯ ಅವರು, ರಾಜ್ಯ ಮಹಿಳಾ ಆಯೋಗಕ್ಕೆ ನಾನು ಯಾವುದೇ ದೂರು ಅಥವಾ ಪತ್ರ ಬರೆದಿಲ್ಲವೆಂದು ಹೇಳಿದ್ದಾರೆ. 
ನಾನು ನನ್ನ ಪತಿ ತಿಪ್ಪರಾಜು ಹವಾಲ್ದಾರರವರು ಅನ್ಯೋನ್ಯವಾಗಿದ್ದೇವೆ. ಮಹಿಳಾ ಆಯೋಗಕ್ಕೆ ನನ್ನ ಹೆಸರಿನಲ್ಲಿ ಕಿಡಿಗೇಡಿಗಳು ದುರುದ್ದೇಶದಿಂದ ಪತ್ರ ಬರೆದಿದ್ದಾರೆ. ಈ ಸಂಬಂಧಪಟ್ಟಂತೆ ನಾನು ಯಾವುದೇ ಪತ್ರ ಬರೆದಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಮತ್ತೊಂದೆಡೆ ಸ್ವತಃ ಶಾಸಕ ತಿಪ್ಪರಾಜು ಹವಾಲ್ದಾರ್ ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿ ರಾಜಕೀಯ ದುರುದ್ದೇಶದಿಂದ ಈ ರೀತಿ ಸುಳ್ಳು ದೂರು ನೀಡಿದ್ದ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಹೇಳಿದ್ದಾರೆ.
ಮತ್ತೊಂದೆಡೆ ಪಿಎಸ್ಐ ಬೇಬಿ ವಾಲೇಕರ್‌ರವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡುತ್ತಾ, ನನಗೂ ತಿಪ್ಪರಾಜು ಹವಾಲ್ದಾರರಿಗೂ ಯಾವುದೇ ಸಂಬಂಧವಿಲ್ಲ. ನಾನು ರಾಯಚೂರಿನಲ್ಲಿ ಪಿಎಸ್ಐ ಕರ್ತವ್ಯ ನಿರ್ವಹಿಸುವಾಗ ಅವರೊಬ್ಬ ಶಾಸಕರಾಗಿ ಪರಿಚಯ. ಪಿಎಸ್ಐ ಅವರೊಂದಿಗೆ ಸಂಬಂಧಪಟ್ಟ ಶಾಸಕರು, ಮಾಧ್ಯಮದವರು, ಮತ್ತಿತರರು ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಸಹಜ. ಇಂತಹ ಸಂಪರ್ಕ ಹೊರತು ಪಡಿಸಿದರೆ, ಬೇರೆ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
SCROLL FOR NEXT