ರಾಜ್ಯ

ಕಳೆದ 15 ವರ್ಷಗಳಲ್ಲಿ 10 ಸಾವಿರ ಕೆರೆಗಳ ಕಣ್ಮರೆ: ಟಿ.ಬಿ ಜಯಚಂದ್ರ

Shilpa D
ಬೆಂಗಳೂರು: ರಾಜ್ಯದಲ್ಲಿರುವ ಕೆರೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಾಣೆಯಾಗುತ್ತಿದೆ. ಇದು ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕೈಗೊಳ್ಳಲಾದ ಗಣತಿಯಿಂದ ತಿಳಿದು ಬಂದಿದೆ.
ಕೆರೆಗಳು ಮಾಯವಾಗುತ್ತಿರುವ ಕುರಿತು ಸಣ್ಣ ನೀರಾವರಿ ಸಚಿವ ಟಿ.ಬಿ ಜಯಚಂದ್ರ ಅವರು ಮೇಲ್ಮನೆಯ ಪ್ರಶ್ನೋತ್ತರ ವೇಳೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಕೆರೆಗಳ ಕಣ್ಮರೆಗೆ ಕಳವಳ ವ್ಯಕ್ತ ಪಡಿಸಿದ ಅವರು ಭವಿಷ್ಯದಲ್ಲಿ ಅಂತರ್ಜಲ ವೃದ್ಧಿಗೆ ಆಸರೆಯಾಗಲಿರುವ ಕೆರೆಗಳನ್ನು ಸಂರಕ್ಷಿಸಬೇಕು. ಒತ್ತುವರಿ ತೆರವುಗೊಳಿಸಿ ನೀರು ತಾಣವನ್ನಾಗಿ ಮಾಡಲು ಸರ್ಕಾರ ಆದ್ಯತೆ ನೀಡಿದೆ ಎಂದು ವಿವರಿಸಿದರು.
ಕಾಂಗ್ರೆಸ್ ವಿ.ಎಸ್ ಉಗ್ರಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು 1986-87 ರಲ್ಲಿ ಕೈಗೊಳ್ಳಲಾದ ಸರ್ವೆ ವೇಳೆ 40,012 ಕೆರೆಗಳಿದ್ದವು. 1993-94ರ ಸರ್ವೆಯಲ್ಲಿ 39,086 ಕೆರೆಗಳು ಹಾಗೂ 2001-01 ಸರ್ವೆಯಲ್ಲಿ 30,773 ಕೆರೆಗಳ ಮಾಹಿತಿ ಇದೆ
2006-07 ಹಾಗೂ 2013-14 ನೇ ಸಾಲಿನ ಗಣತಿಯ ಅಂಶಗಳನ್ನು ಒಪ್ಪದ ಕಾರಣ ಮರುಗಣತಿ ಕೈಗೊಳ್ಳಲಾಗಿದೆ. ಸದ್ಯ 2,418 ಕೆರೆಗಳ ಸರ್ವೆ ಪೂರ್ಣಗೊಂಡಿದ್ದು, ಅರಣ್ಯ ಹಾಗೂ ಸರ್ಕಾರದ ಜಾಗದಲ್ಲಿರುವ 721 ಕೆರೆಗಳ ಸರ್ವೆ ಅಗತ್ಯ ಇಲ್ಲ. ಬಾಕಿ ಗಣತಿ ಕಾರ್ಯ ಪೂರ್ಣಗೊಂಡ ನಂತರ ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದರು.
ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ಒಂದೇ ಇಲಾಖೆಯ ಸುಪರ್ದಿಗೆ ವಹಿಸಲು ಸರ್ಕಾರ ನಿರ್ಧರಿಸಿದೆ, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿರುವಂತೆ, ಸಿಎಂ ಕೂಡ ಒಪ್ಪಿಗೆ ನೀಡಿದ್ದಾರೆ. ಅಂತರ್ಜಲ ಹೆಚ್ಚಿಸಲು ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಕೆರೆ ಸಂಜೀವಿನಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಸದ್ಯ 1,385 ಕೆರೆಗಳಿಗೆ ಒಳಪಟ್ಟ 6,871 ಹೆ.ವಿಸ್ತೀರ್ಣ ಪೈಕಿ 6,319 ಹೆ. ನಷ್ಟು ತೆರವುಗೊಳಿಸಲಾಗಿದೆ, ತೆರವು ಕಾರ್ಯಕ್ಕೆ ಸರ್ವೇಯರ್ ಗಳ ಕೊರತೆ ಇದೆ. ಇಗನ್ನು ಸರಿಪಡಿಸಿಕೊಂಡು ತೆರವು ಕಾರ್ಯ ಚುರುಕುಗೊಳಿಸಲಾಗುವುದು ಎಂದು ಜಯಚಂದ್ರ ಹೇಳಿದ್ದಾರೆ.
SCROLL FOR NEXT