ಎಚ್ ಡಿ ಕುಮಾರ ಸ್ವಾಮಿ (ಸಂಗ್ರಹ ಚಿತ್ರ)
ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಸಲ್ಲಿಸಿದ್ದ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ವಜಾ ಗೊಳಿಸಿದೆ.
ಅಕ್ರಮ ಗಣಿಕಾರಿಕೆ ಪ್ರಕರಣ ಸಂಬಂಧ ಎಚ್ ಡಿ ಕುಮಾರ ಸ್ವಾಮಿ ಅವರು ಜಂತಕಲ್ ಮೈನಿಂಗ್ ಕಂಪನಿಯಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಲೋಕಾಯುಕ್ತ ಕೋರ್ಟ್ ಕೂಡಾ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆಯಲ್ಲಿ ಕುಮಾರಸ್ವಾಮಿ ಅವರ ವಿರುದ್ಧದ 150 ಕೋಟಿ ರು, ಗಣಿಕಪ್ಪದ ಆರೋಪದ ಕುರಿತ ವಿಚಾರಣೆ ನಡೆಸಿದ ಕೋರ್ಟ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಪ್ರಸ್ತುತ ಪ್ರಕರಣದ ವಿಚಾರಣೆ ವಿಶೇಷ ಕೋರ್ಟ್ ನಲ್ಲಿ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ಕಾರಣಕ್ಕೆ ಕುಮಾರ ಸ್ವಾಮಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಇನ್ನು ಈ ವೇಳೆ ಕುಮಾರಸ್ವಾಮಿ ಪರ ವಕೀಲರು ವಾದಮಂಡಿಸಿದ್ದು, ಪ್ರಕರಣ ಹಳೆಯದಾಗಿದ್ದು, ಈ ವರೆಗೂ ಕ್ರಮ ಏಕೆ ಕೈಗೊಂಡಿರಲಿಲ್ಲ ಎಂದು ಪ್ರಶ್ನಿಸಿದ್ದರು. ಅಂತೆಯೇ ದುರುದ್ದೇಶ ಪೂರಕ ಪ್ರಕರಣವಾಗಿದ್ದು, ಪ್ರಕರಣವನ್ನು ಕೈ ಬಿಡುವಂತೆ ಕೋರಿದ್ದರು. ಆದರೆ ಅವರ ವಾದವನ್ನು ಪುರಸ್ಕರಿಸದ ನ್ಯಾಯಾಯಲಯ ಹೆಚ್ ಡಿಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಬಂಧನ ಭೀತಿ: ಹೈ ಕೋರ್ಟ್ ಮೊರೆ ಹೋಗಲಿರುವ ಮಾಜಿ ಮುಖ್ಯಮಂತ್ರಿ
ಇನ್ನು ವಿಶೇಷ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಕುಮಾರ ಸ್ವಾಮಿ ಅವರಿಗೆ ಬಂಧನ ಭೀತಿ ಎದುರಾಗಿದ್ದು, ಇದೇ ಕಾರಣಕ್ಕೆ ಅವರ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಹಾಕಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಈಗಾಗಲೇ ಹೆಚ್ ಡಿಕೆ ಪರ ವಕೀಲರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.