ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹ ಫೈಟರ್ ಕ್ಲಬ್ ಆಗಿ ಮಾರ್ಪಟ್ಟಿದೆ. ತಿಂಗಳಲ್ಲಿ ಕನಿಷ್ಠ ಎರಡು ಜಗಳಗಳಂತೂ ನಡೆದೇ ತೀರುತ್ತವೆ ಎಂದು ತಿಳಿದು ಬಂದಿದೆ.
ಜೈಲಿಗೆ ಪೂರೈಕೆಯಾಗುವ ಮಾಧಕ ವಸ್ತುಗಳಿಗಾಗಿ ಅತಿ ಹೆಚ್ಚಿನ ಜಗಳಗಳು ನಡೆಯುತ್ತವೆ ಎಂದು ಹೇಳಲಾಗುತ್ತಿದೆ. ಕಳೆದ ಜೂನ್ 6 ರಂದು ನಡೆದ ಜಗಳದಲ್ಲಿ ರೌಡಿ ಶೀಟರ್ ಒಬ್ಬ ಗಾಯಗೊಂಡಿದ್ದ. ಜೈಲಿನಲ್ಲಿ ಸಿಬ್ಬಂದಿ ಕೊರತೆಯೂ ಇದಕ್ಕೆ ಕಾರಣವಾಗಿದೆ. ಆದರೆ ಜೈಲಿಗೆ ಮಾದಕ ವಸ್ತು ಪೂರೈಕೆಯಾಗುವುದನ್ನು ತಡೆಯಲು ಕಾರಾಗೃಹ ಪ್ರಾಧಿಕಾರ ಶತ ಪ್ರಯತ್ನ ಮಾಡುತ್ತಿದೆ.
ಜೈಲಿನ ಗೋಡೆಯ ಹೊರಗೆ 50 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಹೀಗಿದ್ದರೂ ಜೈಲಿನೊಳಗೆ ಹೇಗೆ ಮಾಧಕ ವಸ್ತು ಪೂರೈಕೆಯಾಗುತ್ತದೆ ಎಂಬುದನ್ನು ಕಂಡು ಹಿಡಿಯುವುದು ಅಸಾಧ್ಯವಾಗಿದೆ. ಜೈಲಿನೊಳಗೆ ಗಾಂಜಾ ಪೂರೈಸಲು ಕ್ರಿಕೆಟ್ ಬಾಲ್ ಬಳಸಲಾಗುತ್ತಿದೆ.ಚೆಂಡನ್ನು ಕತ್ತರಿಸಿ ಅದರೊಳಗೆ ಗಾಂಜಾ ತುಂಬಿ ಮತ್ತೆ ಅದನ್ನು ಅಂಟಿಸಿ ಜೈಲಿನೊಳಗೆ ಎಸೆಯಲಾಗುತ್ತದೆ.
ಕೈದಿಗಳು ಅದನ್ನು ಎತ್ತಿಕೊಂಡು ಕತ್ತರಿಸಿ ಗಾಂಜಾ ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ. ಈ ಬಾಲ್ ಗಾಗಿ ಜೈಲಿನಲ್ಲಿ ಕೈದಿಗಳ ನಡುವೆ ಜಗಳ ನಡೆಯುತ್ತದೆ.
ಜೈಲಿಗೆ ಒಂದೇ ಒಂದು ಗೋಡೆಯಿದೆ. ಹೀಗಾಗಿ ಗಾಂಜಾ ಸಾಗಿಸುವುದು ಬಹಳ ಸುಲಭವಾಗಿದೆ ಎಂದು ಜೈಲು ಅಧೀಕ್ಷಕ ಪಿಎಸ್ ರಮೇಶ್ ಹೇಳಿದ್ದಾರೆ. ಕಾರಾಗೃಹಕ್ಕೆ ಹೆಚ್ಚುವರಿ 30 ಸಿಬ್ಬಂದಿಯನ್ನು ನೇಮಿಸುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಅಧಿಕವಾಗಿದೆ. ಜೈಲಿನಲ್ಲಿ 500 ಕೈದಿಗಳನ್ನು ನೋಡಿಕೊಳ್ಳಬಹುದಾಗಿದೆ. ಆದರೆ ಇಲ್ಲಿ 652 ಕೈದಿಗಳಿದ್ದಾರೆ. ಒಬ್ಬ ವಾರ್ಡನ್ 200 ಕೈದಿಗಳನ್ನು ನೋಡಿಕೊಳ್ಳಬೇಕಾಗುತ್ತದೆ. 121 ಸಿಬ್ಬಂದಿ ಪೈಕಿ ಕೇವಲ 60 ಮಂದಿ ಸಿಬ್ಬಂದಿಯಿದ್ದಾರೆ.
ಪ್ರತಿದಿನ ಬೆಳಗ್ಗೆ ಸ್ಥಳೀಯ ಪೊಲೀಸರ ಸಹಾಯ ತೆಗೆದುಕೊಂಡು ಗಸ್ತು ತಿರುಗಬೇಕೆಂದು ಕಾರಾಗೃಹ ಅಧಿಕಾರಿಗಳಿಗೆ ತಿಳಿಸಿದ್ದಾರೆ.