ರಾಜ್ಯ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ರೈಲು ಓಡಾಟದ ಅವಧಿ ರಾತ್ರಿ 11 ಗಂಟೆವರೆಗೂ ವಿಸ್ತರಣೆ!

Srinivasamurthy VN

ಬೆಂಗಳೂರು: ಪೂರ್ಣ ಪ್ರಮಾಣದ ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆಗೊಳ್ಳಲು ಕ್ಷಣಗಣನೆ ಆರಂಭವಾಗಿರುವಂತೆಯೇ ಮೆಟ್ರೋ ರೈಲು ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಸಿಹಿ ಸುದ್ದಿ ನೀಡಿದ್ದು, ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಿದೆ.

ಮೆಟ್ರೋ ರೈಲು ಈ ಮೊದಲು ರಾತ್ರಿ10 ಕ್ಕೆ ಕೊನೆಗೊಳ್ಳುತ್ತಿದ್ದು, ಇನ್ನು ಮುಂದೆ ರಾತ್ರಿ 11.25ರವರೆಗೂ ಲಭ್ಯವಾಗಲಿದೆ ಎಂದು ಅಧಿಕಾಗಿಳು ತಿಳಿಸಿದ್ದಾರೆ. ಆದರೆ ದಿನದ ಈ ಕೊನೆ ರೈಲು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ  ಮಾತ್ರ (ಮೆಜೆಸ್ಟಿಕ್‌) ಬಿಡಲಿದ್ದು ನಗರದ ನಾಲ್ಕು ದಿಕ್ಕುಗಳಿಗೂ ಸಂಚಾರ ಸಾಧ್ಯವಾಗಲಿದೆ. ಜೂನ್‌ 19ರಿಂದಲೇ ಈ ಸಮಯ ಅನ್ವಯವಾಗಲಿದೆ ಎಂದು ಮೆಟ್ರೋ ನಿಗಮ ಶುಕ್ರವಾರ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಇದೇ ವೇಳೆ ಬೆಳಗ್ಗೆ 6ಕ್ಕೆ ಆರಂಭವಾಗುತ್ತಿದ್ದ ಮೆಟ್ರೋ ಇನ್ನು ಮುಂದೆ ಬೆಳಗ್ಗೆ 5 ಗಂಟೆಗೆ ಆರಂಭವಾಗಲಿದ್ದು, ಬೆಳ್ಳಂಬೆಳಗ್ಗೆ ದೂರದೂರುಗಳಿಗೆ ಪ್ರಯಾಣ ಮಾಡುವವರಿಗೆ ವರದಾನವಾಗಲಿದೆ. ಬೆಳಗ್ಗೆ 5 ಗಂಟೆಗೆ ಕೇವಲ ಮೆಟ್ರೋ  ಪೈಲಟ್‌ ಗಳಿಗೆ (ಚಾಲಕರಿಗೆ) ಮಾತ್ರ ಪ್ರವೇಶಾವಕಾಶವಿದ್ದ ರೈಲಿನಲ್ಲಿ ಇನ್ನು ಮುಂದೆ ಸಾರ್ವಜನಿಕರ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಈ ರೈಲು ಉಳಿದ ಅವಧಿಯಷ್ಟು ವೇಗವಾಗಿ ಸಂಚರಿಸುವುದಿಲ್ಲ ಎಂದು  ಹೇಳಲಾಗುತ್ತಿದೆ.

ಈ ಮೊದಲು ಮೆಟ್ರೋ ರೈಲು ಬೆಂಗಳೂರಿನಲ್ಲಿ ಆರಂಭಗೊಂಡು ಇದೀಗ 6 ವರ್ಷಗಳಾಗಿದ್ದು, ಬೆಳಗ್ಗೆ 6ಕ್ಕೆ ಮೊದಲ ಮೆಟ್ರೋ ರೈಲು ಸಂಚಾರವಿತ್ತು. ಸಂಪಿಗೆ ರಸ್ತೆ ಮತ್ತು ನಾಗಸಂದ್ರ ನಡುವೆ ಸಂಚರಿಸುವ ರೈಲು ಮಾತ್ರ ಪೀಣ್ಯ  ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಅನುಕೂಲವಾಗುವಂತೆ ಬೆಳಗ್ಗೆ 5.30ಕ್ಕೆ ಸಂಚಾರ ಆರಂಭಿಸುತ್ತಿತ್ತು. ರಾತ್ರಿ 10ಕ್ಕೆ ಮೆಟ್ರೋ ಕೊನೆ ರೈಲು ನಿಲ್ದಾಣಗಳಿಂದ ಬಿಡುತ್ತಿತ್ತು. ಆದರೆ ಇನ್ನು ಮುಂದೆ ಮೆಜೆಸ್ಟಿಕ್‌ ನಿಲ್ದಾಣದಿಂದ  ಪೂರ್ವದ ಬೈಯ್ಯಪ್ಪನಹಳ್ಳಿ, ಇಂದಿರಾನಗರ, ಎಂಜಿ ರಸ್ತೆ, ಪಶ್ಚಿಮದ ಮೈಸೂರು ರಸ್ತೆ ವಿಜಯನಗರ, ಅತ್ತಿಗುಪ್ಪೆ, ಉತ್ತರದ ನಾಗಸಂದ್ರ, ಜಯನಗರ, ಕೆ.ಆರ್‌.ಮಾರುಕಟ್ಟೆ, ದಕ್ಷಿಣದ ಪೀಣ್ಯ, ನಾಗಸಂದ್ರ ಕಡೆಗೆ ರಾತ್ರಿ  11.25ರವರೆಗೂ ಮೆಟ್ರೋ ಮಾರ್ಗಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದು ತಿಳಿದುಬಂದಿದೆ.

ಕೆಂಪೇಗೌಡ ನಿಲ್ದಾಣ ಹೊರತಾಗಿ ನಗರದ 4 ದಿಕ್ಕುಗಳಿಂದ ಆರಂಭಗೊಳ್ಳುವ ಮೆಟ್ರೋ ಮಾರ್ಗಗಳಲ್ಲಿ ಬೇರೆ ಬೇರೆ ಅವಧಿಗೆ ಮೆಟ್ರೋ ಕೊನೆ ರೈಲು ಸಂಚರಿಸಲಿದೆ. ರಾತ್ರಿ 10.50ಕ್ಕೆ ನಾಗಸಂದ್ರದಿಂದ ಯಲಚೇನಹಳ್ಳಿಗೆ ಕೊನೆ  ರೈಲು ಇದ್ದು, ಬೈಯ್ಯಪ್ಪನಹಳ್ಳಿ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ಕೊನೆ ರೈಲು ರಾತ್ರಿ 11ಕ್ಕೆ ರಾತ್ರಿ ಹೊರಡಲಿದೆ. ನಾಯಂಡಹಳ್ಳಿಯಿಂದ ಕೊನೆಯ ರೈಲು ರಾತ್ರಿ 11.05ಕ್ಕೆ ಬಿಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟಣೆ ವೇಳೆ 4 ನಿಮಿಷಕ್ಕೊಂದು ರೈಲು
ಎರಡೂ ಮಾರ್ಗಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇರುವ ಸಮಯದಲ್ಲಿ ಎರಡು ರೈಲುಗಳ ನಡುವಿನ ಅಂತರವನ್ನು 20 ನಿಮಿಷದವರೆಗೆ  ಹೆಚ್ಚಿಸಲಾಗುತ್ತದೆ.   ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೊಂದು ರೈಲು ಸಂಚರಿಸಲಿದೆ.

SCROLL FOR NEXT