ರಾಜ್ಯ

ತಮಿಳುನಾಡಿನಿಂದ ಬೆಂಗಳೂರಿಗೆ ಬಂದ 64 ಅಡಿ ಬೃಹತ್ ವಿಗ್ರಹ ಶಿಲೆ!

Shilpa D
ವೆಲ್ಲೂರು: ಬೆಂಗಳೂರಿನ ಈಜಿಪುರದಲ್ಲಿರುವ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಬೃಹತ್ ವಿಗ್ರಹ ನಿರ್ಮಾಣಕ್ಕೆ ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ತಮಿಳುನಾಡಿನ ವೆಲ್ಲೂರಿನಿಂದ ಎರಡು ಬೃಹತ್ ಶಿಲೆಗಳನ್ನು ಬೆಂಗಳೂರಿಗೆ ತರಿಸಲಾಗಿದೆ.
64 ಅಡಿ ಉದ್ದ 380 ಮೆಟ್ರಿಕ್ ಟನ್ ತೂಕವಿರುವ ಒಂದು ಶಿಲೆ ಹಾಗೂ 24 ಅಡಿ ಉದ್ದ 230 ಮೆಟ್ರಿಕ್ ಟನ್ ಇರುವ ಮತ್ತೊಂದು ಶಿಲೆಯನ್ನು ಶನಿವಾರ ಎರಡು ಮೆಗಾ ಕಾರ್ಗೋ ಟ್ರಕ್ ನಲ್ಲಿ ಬೆಂಗಳೂರಿಗೆ ಕಳುಹಿಸಲಾಗಿದೆ. ಈ ಶಿಲೆಯನ್ನು ಚೆಟ್ಟಿಕುಲಂ ನ ಕೊರ ಕೊಟ್ಟೈ ಗ್ರಾಮದಲ್ಲಿರುವ ಬೆಟ್ಟದಿಂದ ತೆಗೆಯಲಾಗಿದೆ.
ಸುಮಾರು 60 ವರ್ಷಗಳಷ್ಟು ಪುರಾತನವಾದ  ಕೋದಂಡರಾಮಸ್ವಾಮಿ ದೇವಾಲಯದಲ್ಲಿ 108 ಅಡಿ ಉದ್ದದ ವಿಗ್ರಹ ನಿರ್ಮಾಣ ಮಾಡಲು ಕೋದಂಡರಮಸ್ವಾಮಿ ಚಾರಿಟೆಬಲ್ ಟ್ರಸ್ಟ್ ತಯಾರಿ ನಡೆಸುತ್ತಿದೆ. ವಿಗ್ರಹದಲ್ಲಿ 22 ಕೈಗಳು, 11 ಮುಖಗಳು ಕೆತ್ತಲಾಗುತ್ತದೆ. ಮತ್ತೊಂದು ಶಿಲೆಯಲ್ಲಿ ಏಳು ತಲೆಯ ಆದಿಶೇಷನನ್ನು ನಿರ್ಮಿಸಲಾಗುತ್ತದೆ, 27 ಅಡಿ ಪೀಠ ನಿರ್ಮಾಣ ಮಾಡುವ ಯೋಜನೆ ಕೂಡ ಇದೆ. 
ಅಕ್ಟೋಬರ್ 2014ರಲ್ಲಿ ಟ್ರಸ್ಟ್ ಕೆಲಸ ಆರಂಭಿಸಿತು. ತಮಿಳುನಾಡಿನಿಂದ ತಂದ ಶಿಲೆಗಳಿಗೆ ವಿಶೇಷ ಪೂಜೆ ಸಲ್ಲಿಸಿ  ವಿಗ್ರಹ ಕೆತ್ತನೆ ಕೆಲಸ ಆರಂಭಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಶಿಲೆಯನ್ನು ಕತ್ತರಿಸುವ ಕೆಲಸ ಮಾಡಲಾಗುತ್ತಿದೆ. 
160 ಚಕ್ರಗಳಿರುವ ಮೆಗಾ ಕಾರ್ಗೋ ಟ್ರಕ್ ನಲ್ಲಿ ಒಂದು ಶಿಲೆ ಮತ್ತು 90 ಚಕ್ರಗಳಿರುವ ಮತ್ತೊಂದು ಟ್ರಕ್ ನಲ್ಲಿ ಇನ್ನೊಂದು ಶಿಲೆಯನ್ನು ಸಾಗಿಸಲಾಗಿದೆ.
ತಿರುಮಲ ತಿರುಪತಿ ದೇವಾಲಯದ ರಾಜೇಂದ್ರ ಆಚಾರ್ಯ ತಂಡದಿಂದ ವಿಗ್ರಹ ನಿರ್ಮಾಣವಾಗಿದ್ದು, ಉಳಿದ ಕೆಲಸವನ್ನು ಬೆಂಗಳೂರಿನಲ್ಲಿ ಮಾಡಲಾಗುತ್ತದೆ 
ವಿಗ್ರಹದ ಕೆಲಸಕ್ಕಾಗಿ ದೇವಾಲಯದ ಸುತ್ತಲಿನ ಕೆಲ ಮನೆಗಳನ್ನು ಧ್ವಂಸಗೊಳಿಸುವ ಅವಶ್ಯಕತೆಯಿದೆ, ಕೆಲಸ ಪೂರ್ಣಗೊಂಡ ನಂತರ ಮತ್ತೆ ಮನೆಯನ್ನು ನಿರ್ಮಿಸಿಕೊಡುವುದಾಗಿ ಟ್ರಸ್ಟ್ ಮೂಲಗಳು ತಿಳಿಸಿವೆ.
SCROLL FOR NEXT