ಬೆಂಗಳೂರು: ನಮ್ಮ ಮೆಟ್ರೊದ ಗ್ರೀನ್ ಲೈನ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭವಾಗಿ 10 ದಿನಗಳು ಕಳೆದ ನಂತರ ಈ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಭಾರೀ ಪ್ರಮಾಣದಲ್ಲಿ ಕಡಿಮೆಯೇನು ಆಗಿಲ್ಲ ಎಂದು ಇಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು ಮತ್ತು ಟ್ರಾಫಿಕ್ ಪೊಲೀಸರು ಹೇಳುತ್ತಾರೆ.
ಸರಿಯಾಗಿ ಪಾರ್ಕಿಂಗ್ ಸೌಲಭ್ಯ ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕವಿರುವುದರಿಂದ ಹಲವರು ಖಾಸಗಿ ವಾಹನಗಳನ್ನೇ ಬಳಸುತ್ತಿದ್ದಾರೆ. ಇನ್ನು ಕೆಲವು ಕಾರಣಗಳೆಂದರೆ ಆಗಾಗ ಫೀಡರ್ ಬಸ್ಸುಗಳು ಸಿಗದಿರುವುದು, ಮಹಿಳೆಯರಿಗೆ ಮೆಟ್ರೊದಲ್ಲಿ ಮೀಸಲು ಕೋಚ್ ಗಳಿಲ್ಲದಿರುವುದು, ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನರಿಗೆ ಸೌಲಭ್ಯದ ಕೊರತೆ ಕೆಲ ಕಾರಣವಾಗಿದೆ.
ಪೀಕ್ ಅವರ್ ಗಳಲ್ಲಿ ಮೆಟ್ರೊದಲ್ಲಿ ಪ್ರಯಾಣಿಕರ ದಟ್ಟಣೆ ಇರುವುದು ಕೂಡ ಕೆಲವು ಪ್ರಯಾಣಿಕರಿಗೆ ತೊಂದರೆಯಾಗಿದೆ. ಪ್ರಸ್ತುತ ಮೆಟ್ರೊದಲ್ಲಿ ಮೂರು ಕೋಚ್ ಗಳು ಮಾತ್ರ ಇದ್ದು, ಇನ್ನು ಮೂರು ಕೋಚ್ ಗಳು ಸೇರಲು ಡಿಸೆಂಬರ್ ವರೆಗೆ ಕಾಯಬೇಕು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್ ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್, ದ್ವಿಚಕ್ರ ವಾಹನ ಪಾರ್ಕಿಂಗ್ ಸಾಮರ್ಥ್ಯವನ್ನು 12,000ದಿಂದ 20,000ಕ್ಕೆ ಹೆಚ್ಚಿಸಬಹುದು ಎಂದು ಹೇಳಿದರು.