ಬೆಂಗಳೂರು ಅಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು: ಕೇಂದ್ರ ಸರ್ಕಾರದ ಯೋಜನೆಯಡಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗುವ ನಿರೀಕ್ಷೆಯಲ್ಲಿದೆ. ಆದರೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಅಭಿಪ್ರಾಯ ಬೇರೆ. ಬೆಂಗಳೂರು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಒಂದು ಹೈಪ್ ಅಷ್ಟೆ ಎನ್ನುತ್ತಾರೆ ಅವರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗುತ್ತಿರುವ ರಾಜ್ಯಗಳ ನಗರಗಳ ಪೈಕಿ ಬೆಂಗಳೂರು ಏಳನೆಯದ್ದು. ಈ ಯೋಜನೆಯಡಿ ಕೈಗೊಳ್ಳುವ ಕೆಲಸಗಳು ಮತ್ತು ಅದನ್ನು ತ್ವರಿತವಾಗಿ ಮಾಡಿ ಮುಗಿಸಲು ಜಾರ್ಜ್ ನಿನ್ನೆ ಸಭೆ ಕರೆದಿದ್ದರು. ಬೆಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಗಾಗಿ ಮುಂದಿನ 5 ವರ್ಷಗಳಲ್ಲಿ ಸುಮಾರು 1,800 ಕೋಟಿ ರೂಪಾಯಿ ವ್ಯಯಿಸಲಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ 100 ಕೋಟಿಯಂತೆ 5 ವರ್ಷಗಳ ಕಾಲ ಪ್ರತಿ ವರ್ಷ ಮತ್ತು ರಾಜ್ಯ ಸರ್ಕಾರ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಉಳಿದ ಹಣವನ್ನು ಖಾಸಗಿ ಸಂಸ್ಥೆಗಳಿಂದ ಕೊಡುಗೆಯಾಗಿ ಪಡೆಯಲಾಗುತ್ತದೆ.
ಯೋಜನೆಯಡಿ ಕೆಲಸಗಳನ್ನು ಕೈಗೆತ್ತಿಕೊಳ್ಳುವುದರಿಂದ ಸಿಟಿ ಸ್ಮಾರ್ಟ್ ಆಗಲು ಸಾಧ್ಯವಿಲ್ಲ. ಬೆಂಗಳೂರಿಗೆ 1,800 ಕೋಟಿ ರೂಪಾಯಿ ಒಂದು ಪ್ರದೇಶವನ್ನು ಮಾತ್ರ ಅಭಿವೃದ್ಧಿಪಡಿಸಲು ಸಾಧ್ಯವಷ್ಟೆ. ಅಲ್ಲದೆ ಯೋಜನೆಯನ್ನು ಪೂರ್ಣಗೊಳಿಸಲು ವರ್ಷದಲ್ಲಿ 100 ಕೋಟಿ ರೂಪಾಯಿಗೆ ಕೇಂದ್ರ ಸರ್ಕಾರವನ್ನು ಕಾಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಕಾರ್ಯಯೋಜನೆಯನ್ನು ಸಿದ್ಧಪಡಿಸುವಂತೆ ಹೇಳಿದ್ದೇನೆ ಎಂದು ಜಾರ್ಜ್ ಹೇಳಿದರು.
ಮುಂದಿನ ವರ್ಷಾರಂಭದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಿದೆ. ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿಕೆ ಹೊತ್ತಿರುವ ಸಚಿವ ಕೆ.ಜೆ.ಜಾರ್ಜ್ ಇನ್ನುಳಿದ ಸಮಯದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಸಾಧ್ಯವಾದಷ್ಟು ಯೋಜನೆಗಳನ್ನು ನೀಡುವ ಉತ್ಸಾಹದಲ್ಲಿದ್ದಾರೆ. ಅವರಿಗೆ ಬೆಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸಂದೇಹವಿದ್ದರೂ ಕೂಡ ನಗರದ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲು ತಜ್ಞರನ್ನು ಸಂಪರ್ಕಿಸಿದ್ದಾರೆ. ಜನಗ್ರಹದ ಸಹ ಸಂಸ್ಥಾಪಕ ಸ್ವಾತಿ ರಮನಾಥನ್, ಬಿಬಿಎಂಪಿ ಅಧಿಕಾರಿಗಳು ಮತ್ತು ಸರ್ಕಾರದ ಕೆಲವು ಇಲಾಖೆಗಳ ಆಡಳಿತಗಾರರೊಂದಿಗೆ ಸಭೆ ನಡೆಸಿದರು.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕೆ.ಜೆ.ಜಾರ್ಜ್, ಐಟಿ ಸಿಟಿಯ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಹೂಡಿಕೆ ಮಾಡಿದ್ದಕ್ಕಿಂತ ಕೇಂದ್ರದ ಹಣ ಸಹಾಯ ಕಡಿಮೆಯಾಗಿದೆ. ಕರ್ನಾಟಕ ಸರ್ಕಾರ 7,500 ಕೋಟಿ ರೂಪಾಯಿ ವ್ಯಯ ಮಾಡುತ್ತಿದೆ. ಕಳೆದೆರಡು ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಸುಮಾರು 2,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆದರೆ ಸ್ಮಾರ್ಟ್ ಸಿಟಿಗಾಗಿ ಕೇಂದ್ರದ ಆರ್ಥಿಕ ನೆರವು ಸಾಕಾಗುವುದಿಲ್ಲ ಎಂದು ಹೇಳಿದರು.