ಬೆಂಗಳೂರು: ಶಾಸಕರ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿಯಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಅವರಿಗೆ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರ ಮುಂದೆ ಹಾಜರಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಶನಿವಾರ ಸೂಚಿಸಿದೆ.
ಪತ್ರಕರ್ತರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸ್ಪೀಕರ್ ಮುಂದೆ ಹಾಜರಾಗಿ ಹಕ್ಕು ಬಾಧ್ಯತೆ ಸಮಿತಿಯ ಶಿಫಾರಸಿನಂತೆ ಸದನದಲ್ಲಿ ಕೈಗೊಂಡಿರುವ ನಿರ್ಣಯವನ್ನು ಮರುಪರಿಶೀಲಿಸಬೇಕು ಎಂದು ಕೋರಿ ಹೊಸ ಜ್ಞಾಪನಾ ಪತ್ರ ಸಲ್ಲಿಸುವಂತೆ ಸೂಚಿಸಿದೆ.
ಈ ವೇಳೆ ಸ್ಪೀಕರ್ ಮುಂದೆ ಹಾಜರಾದಾಗ ಬಂಧಿಸುವ ಭೀತಿ ಇದೆ ಎಂಬ ಅರ್ಜಿದಾರರ ಪರ ವಕೀಲರ ಆತಂಕಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಣ್ಣ ಅವರು, ಆ ರೀತಿಯ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಮೌಖಿಕ ಭರವಸೆ ನೀಡಿದರು. ಅಲ್ಲದೆ ಒಂದು ವೇಳೆ ಆ ರೀತಿ ಏನಾದರೂ ಬಂಧಿಸಿದರೆ ಯಾವುದೇ ಹೊತ್ತಿನಲ್ಲಿ ಬಂದು ಕೋರ್ಟ್ ಸಂಪರ್ಕಿಸಿ ಎಂದು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.
ಅರ್ಜಿದಾರರನ್ನು ಬಂಧಿಸದಂತೆ ಆದೇಶಿಸಿ ಎಂಬ ಅರ್ಜಿದಾರರ ಪರ ವಕೀಲರ ಮನವಿಯನ್ನು ಕೋರ್ಟ್ ತಳ್ಳಿ ಹಾಕಿದೆ.
ಇನ್ನು ಮುಂದೆ ಯಾವುದೇ ಅವಿಧೇಯತೆ ಪ್ರದರ್ಶಿಸಿದರೆ ಅಥವಾ ಸೊಂಟದ ಕೆಳಗಿನ ಭಾಷೆ ಬಳಸಿದರೆ ಸದನ ನಿಮ್ಮ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಪತ್ರಕರ್ತರಿಗೆ ಗಂಭೀರ ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics